October 15, 2026
Thursday, October 15, 2026
spot_img

ಪಾಟ್ನಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಅಗ್ನಿ ಅವಘಡ: ಪ್ರಯಾಣಿಕರು ಅದೃಷ್ಟವಶಾತ್ ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಸಸಾರಾಮ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರೈಲು ಅಪಘಾತವೊಂದು ಸಂಭವಿಸಿದೆ. ಪಾಟ್ನಾಗೆ ತೆರಳಲು ಸಿದ್ಧವಾಗುತ್ತಿದ್ದ ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಯೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಬೋಗಿ ಹೊತ್ತಿ ಉರಿದಿದೆ.

ಬೆಳಿಗ್ಗೆ 6 ಗಂಟೆಗೆ ಸಂಭವಿಸಿದ ಘಟನೆ:

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ರೈಲು ಎಂದಿನಂತೆ ಬೆಳಿಗ್ಗೆ 6 ಗಂಟೆಗೆ ಸಸಾರಾಮ್ ನಿಲ್ದಾಣದಿಂದ ಪಾಟ್ನಾಗೆ ಹೊರಡಬೇಕಿತ್ತು. ಆದರೆ ರೈಲು ಸಂಚಾರ ಆರಂಭಿಸುವ ಕೆಲವೇ ನಿಮಿಷಗಳ ಮೊದಲು ಬೋಗಿಯಿಂದ ದಟ್ಟವಾದ ಹೊಗೆ ಬರಲಾರಂಭಿಸಿತು. ನೋಡನೋಡುತ್ತಿದ್ದಂತೆ ಇಡೀ ಕಂಪಾರ್ಟ್‌ಮೆಂಟ್ ಬೆಂಕಿಯ ಜ್ವಾಲೆಗೆ ಆಹುತಿಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಶಂಕೆ:

ರೈಲ್ವೆ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಕಾರಣದಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರೈಲು ನಿಲ್ದಾಣದಲ್ಲೇ ಇದ್ದ ಕಾರಣ ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

ತಪ್ಪಿದ ಭಾರಿ ಪ್ರಾಣಾಪಾಯ:

ಅತ್ಯಂತ ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಬೋಗಿಯಲ್ಲಿ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಸದ್ಯ ಘಟನೆಯ ಕುರಿತು ರೈಲ್ವೆ ಇಲಾಖೆ ಹೆಚ್ಚಿನ ತನಿಖೆ ಕೈಗೊಂಡಿದೆ.

Must Read