ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರವಾಗಿ ಸುರಿದ ಮುಸಲಧಾರೆಗೆ ಬೆಂಗಳೂರು ಮಂದಿ ತತ್ತರಿಸಿದ್ದಾರೆ. ಎಡಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ಹೆದ್ದಾರಿಗಳು, ಅಂಡರ್‌ಪಾಸ್‌ಗಳು, ತಗ್ಗುಪ್ರದೇಶಗಳು ಜಲಾವೃತವಾಗಿ ಜನರ ಪರದಾಡುವಂತಾಗಿತ್ತು.
ಬೆಳ್ಳಂದೂರು ಬಳಿಯ ಕರಿಯಮ್ಮನ ಅಗ್ರಹಾರದ ರಸ್ತೆ ಸಂಪೂರ್ಣ ಜಲಾವೃತವಾಗಿ 15ಕ್ಕೂ ಹೆಚ್ಚು ವಾಹನಗಳು, ಗರ್ಭಿಣಿ ಸೇರಿದಂತೆ 50ಕ್ಕೂ ಹೆಚ್ಚು ಜನ ಸಿಲುಕಿಕೊಂಡಿದ್ದರು. ಎಲ್ಲರನ್ನೂ ಟ್ರಾಕ್ಟರ್ ಇತರೆ ವಾಹನಗಳ ಮೂಲಕ ರಕ್ಷಣೆ ಮಾಡಲಾಯಿತು.
ಇನ್ನೂ ಕೆ.ಆರ್.ಸರ್ಕಲ್ ಸರ್ಕಲ್ ಅಂಡರ್ ಪಾಸ್‌ಗೆ ರಾಜಕಾಲುವೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕ್ಷಣಕ್ಷಣಕ್ಕೂ ಅಂಡರ್‌ಪಾಸ್‌ಗಳಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ವಾಹನ ಸವಾರರು ಜೀವ ಭಯದಿಂದ ತತ್ತರಿಸಿದರು. ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಚಂದಾಪುರ ರಸ್ತೆ ಟ್ರಾಫಿಕ್ ಜಾಮ್ ಉಂಟಾಗಿ ನಾಲ್ಕೈದು ಗಂಟೆಗಳ ಕಾಲ ವಾಹನ ಸವಾರರು ನಿಂತಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ರಾಜಕಾಲುವೆ ನೀರೆಲ್ಲಾ ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ, ಇಷ್ಟೆಲ್ಲಾ ಅನಾಹುತವಾದರೂ ಯಾವೊಬ್ಬ ಅಧಿಕಾರಿಯೂ ಇತ್ತ ತಲೆಹಾಕಿಲ್ಲ. ಅಭಿವೃದ್ಧಿಯ ನೆಪವೊಡ್ಡಿ ಮಾಡತ್ತಿರುವ ಕೆಲಸಗಳಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.