ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ವಿರುದ್ಧ ಹೋರಾಡಲು ಇಸ್ರೇಲ್ ಕೇವಲ 48 ಗಂಟೆಗಳಲ್ಲಿ 300,000 ಸೈನಿಕರನ್ನು ಯುದ್ಧ ಭೂಮಿಗಿಳಿಸಿದೆ. ದೇಶದ ಗಡಿಯಲ್ಲಿರುವ 24 ಪಟ್ಟಣಗಳ ಪೈಕಿ 15 ಪಟ್ಟಣಗಳ ನಿವಾಸಿಗಳನ್ನು ಸ್ಥಳಾಂತರಿಸಿರುವುದಾಗಿ ಇಸ್ರೇಲಿ ಸೇನೆ ದೃಢಪಡಿಸಿದೆ. ಹಮಾಸ್ ದಾಳಿಗೆ ಪ್ರತೀಕಾರ ತೀರಿಸಲು ಇಸ್ರೇಲ್ ಸಿದ್ಧವಾಗಿದ್ದು, 48 ಗಂಟೆಗಳಲ್ಲಿ 3 ಲಕ್ಷ ಸೈನಿಕರನ್ನು ಸಜ್ಜುಗೊಳಿಸಿರುವುದು ದಾಖಲೆ ಎಂದು ರಕ್ಷಣಾ ಪಡೆಗಳ ಉನ್ನತ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದರು.
ಶನಿವಾರ ಬೆಳಗ್ಗೆಯಿಂದ ಇಸ್ರೇಲ್ ಮೇಲೆ 4,400 ರಾಕೆಟ್ ಗಳನ್ನು ಹಾರಿಸಲಾಗಿದೆ. ದಾಳಿಗೂ ಮುನ್ನ ಕೆಲವು ಹಮಾಸ್ ಭಯೋತ್ಪಾದಕರು ಇಸ್ರೇಲ್‌ನಲ್ಲಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಒಳನುಸುಳುವಿಕೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಲೆಬನಾನ್‌ನಿಂದ ಇಸ್ರೇಲಿ ಭೂಪ್ರದೇಶಕ್ಕೆ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ. ಲೆಬನಾನಿನ ಗಡಿಗೆ ಹತ್ತಿರದ ಪಟ್ಟಣಗಳಲ್ಲಿ ಇಸ್ರೇಲಿ ನಾಗರಿಕರು ತಮ್ಮ ಮನೆಗಳಲ್ಲಿಯೇ ಉಳಿಯುವಂತೆ ಆದೇಶಿಸಲಾಗಿದೆ. ಹಮಾಸ್ ಭಯೋತ್ಪಾದಕರನ್ನು ಹತ್ತಿಕ್ಕುವ ಸಲುವಾಗಿ ರಾತ್ರಿಯಿಡೀ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಲಾಯಿತು.
ಶನಿವಾರದ ದಾಳಿಯಿಂದ 700 ಕ್ಕೂ ಹೆಚ್ಚು ಇಸ್ರೇಲಿಗಳು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ 2000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಜಾದಲ್ಲಿ ಒತ್ತೆಯಾಳುಗಳ ಸಂಖ್ಯೆ 100 ಮೀರಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಹೇಳಿದೆ. ಗಾಜಾ ಗಡಿಯಲ್ಲಿರುವ ಎಲ್ಲಾ ಪಟ್ಟಣಗಳ ನಿಯಂತ್ರಣವನ್ನು ಇಸ್ರೇಲಿ ಪಡೆಗಳು ಮರಳಿ ಪಡೆದಿರುವುದಾಗಿ ಡೇನಿಯಲ್ ಹಗರಿ ಹೇಳಿದರು.