ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಪುರದಲ್ಲಿ ಇಂದಿನಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ನಿಗದಿಯಂತೆ ಪಂದ್ಯ ಇಂದು ಮುಂಜಾನೆ 9:30 ಕ್ಕೆ ಆರಂಭವಾಗಲಿದ್ದು, ಟಾಸ್ 9 ಗಂಟೆಗೆ ನಡೆಯಲಿದೆ. ಆದರೆ ಈ ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಕಾನ್ಪುರದಲ್ಲಿ ಮಳೆ ಸುರಿಯಲಾರಂಭಿಸಿದೆ. ಹೀಗಾಗಿ ಟಾಸ್ ವಿಳಂಬವಾಗಲಿದೆ. ಮಳೆಯಿಂದಾಗಿ ಮೈದಾನದ ಮೇಲೆ ಹೊದಿಕೆಗಳನ್ನು ಹಾಕಲಾಗಿದ್ದು, ಪ್ರಸ್ತುತ ಮಳೆ ನಿಂತಿದ್ದರೂ, ಅವುಗಳನ್ನು ತೆರವುಗೊಳಿಸಲಾಗಿಲ್ಲ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಮೊದಲ ದಿನ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಿನವಿಡೀ ದಟ್ಟವಾದ ಮೋಡ ಕವಿದ ವಾತಾವರಣ ಇರಲಿದೆ. ಹೀಗಾಗಿ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಅದರಲ್ಲೂ ಮೊದಲ ಸೆಷನ್ ನಂತರ ಶೇ.50ರಿಂದ 80ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಎರಡನೇ ದಿನವೂ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಆಟದ ಮೂರನೇ ದಿನ ಅಂದರೆ ಭಾನುವಾರ ಬೆಳಿಗ್ಗೆ ಮಳೆ ಬೀಳುವ ಸಾಧ್ಯತೆ ಇದ್ದು, ಆ ಬಳಿಕ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.