ಕೊಡಗಿನಲ್ಲಿ ಭಾರೀ ಮಳೆ: ಹಲವು ಮನೆಗಳು ಜಲಾವೃತ, ಉಕ್ಕಿ ಹರಿದ ನದಿ

ಹೊಸದಿಗಂತ ವರದಿ, ಮಡಿಕೇರಿ:
ಸೋಮವಾರ ರಾತ್ರಿ ಕೊಡಗಿನ ಗಡಿ ಭಾಗವಾದ ಕೊಯನಾಡು ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಕೊಯನಾಡುವಿನ ಕಿಂಡಿ ಅಣೆಕಟ್ಟೆಯಲ್ಲಿ ಭಾರೀ ಪ್ರಮಾಣ ಮರಗಳು ಸಿಲುಕಿಕೊಂಡ ಪರಿಣಾಮ ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಆ ಭಾಗದಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಸಂತ್ರಸ್ತರನ್ನು ಕೊಯನಾಡಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕೊಯನಾಡು-ಸಂಪಾಜೆ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ಪಯಸ್ವಿನಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ದ.ಕ.ಜಿಲ್ಲೆಯ ಕಲ್ಲುಗುಂಡಿಯ ಕೆಲವು ಅಂಗಡಿ ಮುಂಗಟ್ಟುಗಳ ಪರಿಕರಗಳು ಕೊಚ್ಚಿಹೋಗಿವೆ.ಅಲ್ಲದೆ ಅಲ್ಲಿ‌ನ ಕೋಳಿ ಅಂಗಡಿಯೊಂದಕ್ಕೆ ನೀರು ನುಗ್ಗಿದ ಪರಿಣಾಮ ಕೋಳಿಗಳು ಜಲಸಮಾಧಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೊಡಗು ಸಂಪಾಜೆ ಗ್ರಾಮದ ಕಲ್ಲಾಳದಲ್ಲಿ ಮಣ್ಣು ಕುಸಿದ ಪರಿಣಾಮ ಕಲ್ಲಾಳ ರಸ್ತೆ ಬಂದ್ ಆಗಿದ್ದು, ಸಂಪಾಜೆ ಗ್ರಾಮದ ಶೇಷಮ್ಮ ಎಂಬವರ ಮನೆಯ ಒಳಗಿನ ಗೋಡೆ ಬಿರುಕು ಬಿಟ್ಟಿರುವುದಾಗಿ ಹೇಳಲಾಗಿದೆ. ಮನೆಯ ಸುತ್ತಮುತ್ತ ನೀರು, ಕೆಸರು ಹರಿದು ಅಪಾಯದ ಸ್ಥಿತಿಯಲ್ಲಿದ್ದು, ಮನೆಯಲ್ಲಿರುವ ಸಾಮಾಗ್ರಿಗಳನ್ನು ಸ್ಥಳೀಯರ ನೆರವಿನಿಂದ ಸ್ಥಳಾಂತರಿಸಲಾಗಿದೆ.
ಜಿಲ್ಲಾಧಿಕಾರಿ ಭೇಟಿ:
ಸೋಮವಾರ ರಾತ್ರಿ ಸುರಿದ‌ ಮಳೆಗೆ ಕೊಯನಾಡು, ಸಂಪಾಜೆ ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಕೊಡಗು ಜಿಲ್ಲಾಧಿಕಾರಿ ಡಾ.‌ಬಿ.ಸಿ.ಸತೀಶ, ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!