ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ತಡರಾತ್ರಿ ರಾಜ್ಯಾದ್ಯಂತ ಭಾರೀ ಮಳೆಯಾಗಿದ್ದು, ರಸ್ತೆಗಳೆಲ್ಲ ಹಳ್ಳವಾಗಿವೆ. ಇನ್ನು ರಾಯಚೂರಿನಲ್ಲಿ ಮಳೆ ಅಬ್ಬರಿಸಿದ್ದು, ಲಿಂಗಸುಗೂರು ಪಟ್ಟಣದ ಪಿಂಚಣಿಪುರ ಓಣಿಯಲ್ಲಿ 60 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಮಧ್ಯರಾತಿ ಜನ ನಿದ್ರೆಗೆ ಜಾರಿದ್ದ ವೇಳೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿದ್ದು, ಮನೆಯಿಂದ ನೀರು ಹೊರಹಾಕಲು ಜನ ಪರದಾಡಿದ್ದಾರೆ. ಮಳೆ ನೀರಿಂದ ಮನೆಗಳಲ್ಲಿನ ಬಹುತೇಕ ವಸ್ತುಗಳು ಹಾನಿಗೊಳಗಾಗಿವೆ. ಇಷ್ಟೇ ಅಲ್ಲದೇ ರಸ್ತೆಗಳ ಮೇಲೂ ನೀರು ಹರಿಯುತ್ತಿದ್ದು ಜನ ಓಡಾಡಲು ತೀವ್ರ ಹರಸಾಹಸ ಪಡುತ್ತಿದ್ದಾರೆ. ಇನ್ನು ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿದ್ದಾರೆ. ಜನ ತಮ್ಮ ಕೆಲಸಗಳಿಗೆ ಹೋಗಲಾರದೆ ಮಳೆಯನ್ನು ಬೈದುಕೊಂಡಿದ್ದಾರೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಭಾರೀ ಸಮಸ್ಯೆ ಎದುರಾಗಿದೆ.