ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಸುಪ್ರಸಿದ್ಧ ಕೋಝಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಒಂದು ಭೀಕರ ಅಪಘಾತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿದ್ದ ಬರೋಬ್ಬರಿ 137 ವರ್ಷಗಳ ಇತಿಹಾಸ ಹೊಂದಿದ್ದ ಭವ್ಯ ಗಡಿಯಾರ ಗೋಪುರ ನವೀಕರಣ ಕಾರ್ಯದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗುರುವಾರ ಬೆಳಗ್ಗೆ 11:10 ರ ಸುಮಾರಿಗೆ ಸಂಭವಿಸಿದ ಈ ಘಟನೆಯಿಂದಾಗಿ ರೈಲ್ವೆ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಹಳಿಗಳ ಮೇಲೆ ಬಿದ್ದ ಅವಶೇಷಗಳು: ರೈಲು ಸೇವೆ ವ್ಯತ್ಯಯ
ಅಮೃತ್ ಭಾರತ್ ಯೋಜನೆಯಡಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಾಗ ಈ ಐಕಾನಿಕ್ ಗೋಪುರವು ಮಧ್ಯದಲ್ಲೇ ಎರಡು ಹೋಳಾಗಿ ಧರಾಶಾಹಿಯಾಗಿದೆ. ಇದರ ಬೃಹತ್ ಅವಶೇಷಗಳು ಮೂರನೇ ರೈಲ್ವೆ ಹಳಿ ಹಾಗೂ ಪ್ಲಾಟ್‌ಫಾರ್ಮ್‌ನ ಮೇಲಕ್ಕೆ ಬಿದ್ದಿವೆ. ಪರಿಣಾಮವಾಗಿ, ಈ ಮಾರ್ಗದಲ್ಲಿ ಚಲಿಸುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ತಕ್ಷಣವೇ ಬದಲಾವಣೆ ಮಾಡಲಾಗಿದೆ.

ಕೂದಲೆಳೆ ಅಂತರದಲ್ಲಿ ಬದುಕುಳಿದ ಪ್ರಯಾಣಿಕರು
ಅವಘಡದ ಸಮಯದಲ್ಲಿ ಮೂರನೇ ಹಳಿಯಲ್ಲಿ ರೈಲೊಂದು ನಿಂತಿತ್ತಾದರೂ, ಗೋಪುರದ ಭಾಗಗಳು ಬೋಗಿಗಳ ಮೇಲೆ ಬೀಳದೆ ಪಕ್ಕದಲ್ಲಿ ಬಿದ್ದಿರುವುದರಿಂದ ದೊಡ್ಡ ವಿಪತ್ತು ದೂರಾಗಿದೆ. ಅದೃಷ್ಟವಶಾತ್, ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕುಸಿತಕ್ಕೆ ನಿರಂತರ ಮಳೆಯೇ ಕಾರಣ?
ಕಳೆದ ಕೆಲವು ದಿನಗಳಿಂದ ಕೋಝಿಕ್ಕೋಡ್ ಪರಿಸರದಲ್ಲಿ ಸತತವಾಗಿ ಭಾರೀ ಮಳೆಯಾಗುತ್ತಿದೆ. ಈ ಮಳೆಯ ತೇವಾಂಶದಿಂದಾಗಿ ಶತಮಾನದಷ್ಟು ಹಳೆಯದಾದ ಈ ಪಾರಂಪರಿಕ ಕಟ್ಟಡವು ದುರ್ಬಲಗೊಂಡು ಕುಸಿದಿದೆಯೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.



