Wednesday, October 5, 2022

Latest Posts

ಅಂಕೋಲಾದಲ್ಲಿ ಭಾರೀ ಮಳೆ: ರಸ್ತೆ ಕುಸಿತ, ವಾಹನ ಸಂಚಾರಕ್ಕೆ ತೊಡಕು

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನಲ್ಲಿ ಶುಕ್ರವಾರ ನಿರಂತರವಾಗಿ ಮಳೆ ಸುರಿದಿದ್ದು ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಿರು ಸೇತುವೆ ಬಳಿ ರಸ್ತೆ ಕುಸಿತವಾಗಿ ವಾಹನ ಸಂಚಾರಕ್ಕೆ ತೊಂದರೆ ಎದುರಾಗಿದೆ.
ಹೆದ್ದಾರಿ ಕುಸಿದ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಕಂದಕ ನಿರ್ಮಾಣವಾಗಿದ್ದು ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಪ್ರತಿದಿನ ಸಹಸ್ರಾರು ಭಾರೀ ವಾಹನಗಳ ಓಡಾಟ ಇರುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕುಸಿತ ಆಗಿರುವುದರಿಂದ ಕುಸಿತ ಸಂಭವಿಸಿದ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಕೇವಲ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಅಭಿಯಂತರರು ಆಗಮಿಸಿ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಕ್ಕೆ ಸೂಚನೆ ನೀಡಿದರು.
ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಭೇಟಿ ನೀಡಿ ಒಂದು ಬದಿಯಿಂದ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು.
ಪಿ.ಎಸ್. ಐ ಪ್ರವಿಣಕುಮಾರ್, 112 ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.
ರಸ್ತೆ ಕುಸಿತ ಆಗಿರುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕೆಲಸ ಮಾಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!