ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಭಾನುವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯೊಂದು ಕುಸಿದು ಬಿದ್ದು 20 ಕುರಿಗಳು ಸಾವನ್ನಪ್ಪಿವೆ.
ಕುರಿಗಳು ತಮ್ಮೇಗೌಡ ಎಂಬುವವರಿಗೆ ಸೇರಿದ್ದಾಗಿದೆ. ಭಾನುವಾರ ರಾತ್ರಿ 10 ಗಂಟೆ ವೇಳೆಗೆ ಬಿರುಸಿನಿಂದ ಆರಂಭವಾದ ಮಳೆ ಮಧ್ಯರಾತ್ರಿ ವರೆಗೆ ಸುರಿದಿದೆ. ಇದರ ಪರಿಣಾಮ ಕೊಟ್ಟಿಗೆ ಕುಸಿದು ಬಿದ್ದಿದೆ.
ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಮಹೇಶ್ ಸೋಮವಾರ ಬೆಳಗ್ಗೆ ಭೇಟಿ ನೀಡಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಸ್ಥಳದಲ್ಲೇ ಇದ್ದ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ಹಾಗೂ ಕುರಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ವಿಶ್ವನಾಥ್ ರವರಿಗೆ ಕಾನೂನು ಬದ್ಧವಾಗಿ ಕುರಿಗಾರರಿಗೆ ನೀಡಬೇಕಾದ ಪರಿಹಾರ ಹಣವನ್ನು ಕೂಡಲೇ ದೊರಕಿಸಿ ಕೊಡುವಂತೆ ಸೂಚಿಸಿದ್ದಾರೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಯಲು ಹಾಗೂ ಮಲೆನಾಡು ಭಾಗದ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗೆ ಮಳೆ ಹಾನಿಯುಂಟುಮಾಡಿದ್ದರೆ, ಮಲೆನಾಡು ಹಾಗೂ ಬಯಲು ಭಾಗದಲ್ಲಿ ಅಡಿಕೆಬೆಳೆಗಾರರು ಸಂತಸಗೊಂಡಿದ್ದಾರೆ.
ಮಳೆಯಿಲ್ಲದೆ ಸಹಸ್ರಾರು ಎಕರೆ ಅಡಿಕೆ ತೋಟ ಒಣಗಲಾರಂಭಿಸಿತ್ತು. ರೈತರು ತೋಟಗಳಿಗೆ ನೀರುಣಿಸಲು ಪರದಾಡುವಂತಾಗಿತ್ತು. ಮಳೆ ಕೊರತೆ ಕಾರಣಕ್ಕೆ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದದಲ್ಲದೆ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದ ಕಾರಣ ಮರಗಳ ಸುಳಿ ಒಣಗಲಾರಂಭಿಸಿತ್ತು. ಇನ್ನೂ ಕೆಲವಡೆ ಬೋರ್‌ವೆಲ್‌ಗಳಲ್ಲಿ ನೀರಿದ್ದರೂ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ನೀರುಣಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು.