ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅತಿಯಾದ ಬಿಸಿಲಿನಿಂದಾಗಿ ಜನ ಹೈರಾಣಾಗಿದ್ದರು. ಈ ಬೆನ್ನಲ್ಲೇ ಇದೀಗ ನಿನ್ನೆ ರಾತ್ರಿ ಹೆಚ್ಚು ಮಳೆ ಸುರಿದಿದ್ದು, ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ.
ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ.
ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಬುಧವಾರ ಸಂಜೆ ವರ್ಷಧಾರೆ ಸುರಿದಿದ್ದು, ತಂಪೆರೆದಿದೆ. ಮೂಡಿಗೆರೆ, ಕಳಸ, ಎನ್ಆರ್ ಪುರ ತಾಲೂಕಿನ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ವರ್ಷದ ಮೊದಲ ಮಳೆಯ ಸಿಂಚನಕ್ಕೆ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಆರ್ದ್ರತೆ ಕಂಡುಬರುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ, ಗುರುವಾರ ಸಂಜೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ, ಗರಿಷ್ಠ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಐಎಂಡಿ ತಿಳಿಸಿದೆ.