ವರ್ಷದ ಹಿಂದೆ ಅಮ್ಮನ ಬಗ್ಗೆ ಪ್ರಧಾನಿ ಮೋದಿ ಬರೆದ ಆಪ್ತ ಟಿಪ್ಪಣಿ ಹೀಗಿತ್ತು…

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಈ ಶತಮಾನದ ಪ್ರಪಂಚ ಅತ್ಯಂತ ಬಲಿಷ್ಠ ನಾಯಕನಿಗೆ ಜನ್ಮವಿತ್ತ ಮಹಾತಾಯಿ ಹೀರಾಬೆನ್ ಕಾಲನ ಕರೆಗೆ ಓಗೊಟ್ಟು ಸಾಗಿದ್ದಾರೆ. 100 ನೂರು ವರ್ಷಗಳ ತುಂಬು ಬಾಳು ಬಾಳಿದ ಹಿರಾಬೆನ್‌ ಅವರದ್ದು ಸರಳತೆಯೇ ಸಾಕಾರಗೊಂಡಿದ್ದ ಜೀವನ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಅವರು ತಾಯಿ ಹೀರಾಬೆನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ವರ್ಷ ಹಿರಾಬೆನ್‌ಗೆ 100 ವರ್ಷ ತುಂಬಿದ ಸಂಸರ್ಭದಲ್ಲಿ ಮೋದಿ ತಮ್ಮ ತಾಯಿಯ ಜೀವನ ಹೋರಾಟ ವಿವರಿಸುವ ಬ್ಲಾಗ್ ಬರೆಯುವ ಮೂಲಕ ಹಲವು ವಿಚಾರಗಳನ್ನು ಸ್ಮರಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಬ್ಲಾಗ್ ಪೋಸ್ಟ್ ನ ಭಾವಾನುವಾದ ಹೀಗಿದೆ.. 
ಅಮ್ಮ – ಈ ಪದಕ್ಕೆ ಸರಿಸಮನಾಗಿ ನಿಘಂಟಿನಲ್ಲಿ ಯಾವುದೇ ಪದವಲ್ಲ. ಪ್ರೀತಿ, ತಾಳ್ಮೆ, ನಂಬಿಕೆಗೆ ಮತ್ತೊಂದು ಹೆಸರು ತಾಯಿ. ನನ್ನ ತಾಯಿ ಕುರಿತಾದ ವಿಚಾರಗಳನ್ನು ಹಂಚಿಕೊಳ್ಳಲು ನಾನು ತುಂಬಾ ಸಂತೋಷ ಮತ್ತು ಸಂಭ್ರಮಪಡುತ್ತೇನೆ. ಹೀರಾಬಾ ಇಂದು ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷ. ನನ್ನ ತಂದೆ ಬದುಕಿದ್ದರೆ ಅವರೂ ಕಳೆದ ವಾರ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ. ಎಲ್ಲಾ ತಾಯಂದಿರಂತೆ! ಆಗ ಹೇಳಿದ್ದಳೋ ಇನ್ನೂ ಅವಳು ಹಾಗೆಯೇ ಇದ್ದಾಳೆ. ವಯಸ್ಸು, ದೈಹಿಕವಾಗಿ ಬದಲಾವಣೆಗಳಾಗಿರಬಹುದು, ಆದರೆ ಮಾನಸಿಕವಾಗಿ ಅವಳು ಎಂದಿನಂತೆ ಎಚ್ಚರವಾಗಿರುತ್ತಾಳೆ.
ನನ್ನ ಜೀವನದಲ್ಲಾದ ಒಳ್ಳೆಯದು ಮತ್ತು ನನ್ನ ಪಾತ್ರದಲ್ಲಾದ ಒಳ್ಳೆಯದೆಲ್ಲವಕ್ಕೂ ನನ್ನ ಹೆತ್ತವರೇ ಕಾರಣವೆಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಇಂದು, ನಾನು ದೆಹಲಿಯಲ್ಲಿ ಕುಳಿತಿದ್ದರೂ ನನ್ನೊಳಗೆ ಹಿಂದಿನ ನೆನಪುಗಳೇ ತುಂಬಿ ಹೋಗಿವೆ.
ಅಮ್ಮ ಗುಜರಾತ್‌ನ ಮೆಹ್ಸಾನಾದ ವಿಸ್‌ನಗರದಲ್ಲಿ ಜನಿಸಿದಳು. ಇದು ನನ್ನ ತವರು ವಡ್‌ನಗರಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ಹುಟ್ಟಿದ ಕೆಲ ವರ್ಷಗಳಲ್ಲಿಯೇ ತಾಯಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗಕ್ಕೆ ಕಳೆದುಕೊಂಡಳು. ಅವಳಿಗೆ ಅಮ್ಮನ ಮುಖವಾಗಲಿ, ಅವಳ ಮಡಿಲಲ್ಲಿರುವ ನೆಮ್ಮದಿಯಾಗಲಿ ನೆನಪಿಲ್ಲ. ಅವಳು ತನ್ನ ಇಡೀ ಬಾಲ್ಯವನ್ನು ತಾಯಿಯಿಲ್ಲದೆ ಕಳೆದಳು. ನಾವೆಲ್ಲರೂ ಮಾಡುವಂತೆ ಅವಳಿಗೆ ತನ್ನ ತಾಯಿಯ ಮಡಿಲಲ್ಲಿ ವಿಶ್ರಮಿಸಲಾಗಲಿಲ್ಲ. ಅವಳು ಶಾಲೆಗೆ ಹೋಗಿ ಓದಲು ಮತ್ತು ಬರೆಯಲು ಕಲಿಯಲು ಸಾಧ್ಯವಾಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು. ತನ್ನ ಬಾಲ್ಯದಲ್ಲಿ, ಅವಳು ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು ಮತ್ತು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಳು. ಮದುವೆಯ ನಂತರವೂ ಆಕೆ ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದಳು. ಕುಟುಂಬದಲ್ಲಿ ಹಿರಿಯ ಮಗಳಾಗಿದ್ದ ಅವಳು ಮದುವೆಯ ನಂತರ ಮನೆಯ ಹಿರಿಯ ಸೊಸೆಯಾದಳು. ದೊಡ್ಡ ಜವಾಬ್ದಾರಿಗಳು ಮತ್ತು ದೈನಂದಿನ ಹೋರಾಟಗಳ ಹೊರತಾಗಿಯೂ, ತಾಯಿ ಇಡೀ ಕುಟುಂಬವನ್ನು ಶಾಂತ ಮತ್ತು ಧೈರ್ಯದಿಂದ ಒಟ್ಟಿಗೆ ಹಿಡಿದಿದ್ದಳು.
ವಡ್‌ನಗರದಲ್ಲಿ, ನಮ್ಮ ಕುಟುಂಬವು ಸ್ನಾನದ ಮನೆಯಂತಹ ಕಿಟಕಿಯೂ ಇಲ್ಲದ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಈ ಒಂದು ಕೋಣೆಯ ವಠಾರವನ್ನು ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು. ಅಲ್ಲಿ ನಾವೆಲ್ಲರೂ- ನನ್ನ ಪೋಷಕರು, ನನ್ನ ಒಡಹುಟ್ಟಿದವರು ಮತ್ತು ನಾನು ಅದರಲ್ಲಿಯೇ ಇದ್ದೆವು.
ಅಮ್ಮ ಸಮಯಪಾಲನೆ ಮಾಡುತ್ತಿದ್ದರು. ತಂದೆಯಂತೆ ಬೆಳಗ್ಗೆ 4 ಏಳುತ್ತಿದ್ದಳು ಮತ್ತು ನೆಚ್ಚಿನ ಭಜನೆಯಾದ ಜಲ್ಕಮಲ್ ಛಡಿ ಜಾನೇ ಬಾಲಾ, ಸ್ವಾಮಿ ಅಮರೋ ಜಗ್ಸೆ.. ಸ್ತೋತ್ರಗಳನ್ನು ಗುನುಗುತ್ತ  ಬೆಳಿಗ್ಗೆಯ ಕೆಲಸಗಳನ್ನು ಮುಗಿಸುತ್ತಿದ್ದಳು.
ಮನೆಯ ಖರ್ಚನ್ನು ನಿಭಾಯಿಸಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಆ ಬಳಿಕ ಚರಕವನ್ನು ತಿರುಗಿಸುತ್ತಿದ್ದಳು. ಹತ್ತಿ ಸುಲಿಯುವುದರಿಂದ ಹಿಡಿದು ನೂಲು ನೂಲುವವರೆಗೆ ಎಲ್ಲವನ್ನೂ ಮಾಡುತ್ತಿದ್ದಳು. ಈ ಬೆನ್ನು ಮುರಿಯುವ ಕೆಲಸದಲ್ಲಿಯೂ, ಹತ್ತಿ ಮುಳ್ಳುಗಳು ನಮಗೆ ಚುತ್ತುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಳ ಪ್ರಧಾನ ಕಾಳಜಿಯಾಗಿತ್ತು.
ಮಳೆಗಾಲದಲ್ಲಿ ನಮ್ಮ ಛಾವಣಿ ಸೋರುತ್ತದೆ, ಮನೆ ಒಳಕ್ಕೆ ನೀರು ನುಗ್ಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾತ್ತಿದ್ದಳು ಎಂಬುದನ್ನು ನನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಮುಂದಿನ ಕೆಲವು ದಿನಗಳವರೆಗೆ ಅವಳು ಈ ನೀರನ್ನು ಬಳಸುತ್ತಿದ್ದಳು. ಜಲ ಸಂರಕ್ಷಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ!
ಶುಚಿತ್ವದ ಕಡೆಗೆ ಆಕೆಯ ಗಮನ ಇಂದಿಗೂ ಸ್ಪಷ್ಟವಾಗಿದೆ. ನಾನು ಅವಳನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಹೋದಾಗ, ಅವಳು ನನಗೆ ತನ್ನ ಕೈಯಿಂದ ಸಿಹಿತಿಂಡಿಗಳನ್ನು ನೀಡುತ್ತಾಳೆ. ನಾನು ತಿನ್ನುವುದನ್ನು ಮುಗಿಸಿದ ನಂತರ ಚಿಕ್ಕ ಮಗುವಿನ ತಾಯಿಯಂತೆ ನ್ಯಾಪ್ಕಿನ್ ತೆಗೆದುಕೊಂಡು ನನ್ನ ಮುಖವನ್ನು ಒರೆಸುತ್ತಾಳೆ.
ನಾನು ಯಾವಾಗಲೂ ನೆನಪಿಸಿಕೊಳ್ಳುವ ತಾಯಿಯ ಮತ್ತೊಂದು ಅಭ್ಯಾಸವೆಂದರೆ ಇತರ ಜೀವಿಗಳ ಬಗ್ಗೆ ಅವಳ ವಿಶೇಷ ವಾತ್ಸಲ್ಯ. ಪ್ರತಿ ಬೇಸಿಗೆಯಲ್ಲಿ, ಅವಳು ಪಕ್ಷಿಗಳಿಗೆ ನೀರಿನ ಪಾತ್ರೆಗಳನ್ನು ಹಾಕುತ್ತಿದ್ದಳು. ನಮ್ಮ ಮನೆಯ ಸುತ್ತಲಿರುವ ಬೀದಿನಾಯಿಗಳು ಎಂದಿಗೂ ಹಸಿವಿನಿಂದ ಇರಲು ಅವಳು ಬಿಡುತ್ತಿರಲಿಲ್ಲ.
ಅಮ್ಮ ಇತರ ಜನರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಿದ್ದಳು. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವಳು ತುಂಬಾ ದೊಡ್ಡ ಹೃದಯದವಳು. ನನ್ನ ತಂದೆಯ ಆಪ್ತ ಸ್ನೇಹಿತರೊಬ್ಬರು ಹತ್ತಿರದ ಹಳ್ಳಿಯಲ್ಲಿ ಇರುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್‌ ನನ್ನು ನಮ್ಮ ಮನೆಗೆ ಕರೆತಂದರು. ಅವರು ನಮ್ಮೊಂದಿಗೆ ಉಳಿದುಕೊಂಡರು ಮತ್ತು ಅವರ ಅಧ್ಯಯನವನ್ನು ಪೂರ್ಣಗೊಳಿಸಿದರು. ಅಮ್ಮ ಅಬ್ಬಾಸ್ ಬಗ್ಗೆ ನಮ್ಮಷ್ಟೇ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್‌ನಂದು ಅವನ ನೆಚ್ಚಿನ ಖಾದ್ಯಗಳನ್ನು ತಯಾರಿಸುತ್ತಿದ್ದಳು. ಹಬ್ಬ ಹರಿದಿನಗಳಲ್ಲಿ ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ವಿಶೇಷ ತಯಾರಿಯನ್ನು ಸವಿಯುವುದು ಮಾಮೂಲಿಯಾಗಿತ್ತು.
ಅಮ್ಮನಿಗೆ ನನ್ನ ಮೇಲೆ ಮತ್ತು ಅವರು ನೀಡಿದ ಸಂಸ್ಕಾರಗಳ ಬಗ್ಗೆ ಯಾವಾಗಲೂ ಅಪಾರ ವಿಶ್ವಾಸವಿತ್ತು. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ದಶಕಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ನಾನು ಸಾಂಸ್ಥಿಕ ಚಟುವಟಿಕೆಗಳಲ್ಲಿ ತುಂಬಾ ನಿರತನಾಗಿದ್ದೆ ಮತ್ತು ನನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿಲ್ಲ. ಆ ಅವಧಿಯಲ್ಲಿ ನನ್ನ ಅಣ್ಣ ತಾಯಿಯನ್ನು ಬದರಿನಾಥ್ ಮತ್ತು ಕೇದಾರನಾಥಕ್ಕೆ ಕರೆದುಕೊಂಡು ಹೋದರು. ನನ್ನ ತಾಯಿ ಬದರಿನಾಥದಲ್ಲಿ ದರ್ಶನವನ್ನು ಮುಗಿಸಿದ ವೇಳೆ ಹವಾಮಾನವು ಹಠಾತ್ತನೆ ಹದಗೆಟ್ಟಿತು. ಆಗ ಕೆಲವರು ಅಲ್ಲಿಗೆ ಬಂದು ಮೋದಿಯವರ ತಾಯಿಯೇ ಎಂದು ವಿಚಾರಿಸಿ ಕಂಬಳಿಗಳು ಮತ್ತು ಚಹಾವನ್ನು ನೀಡಿದರು. ಜೊತೆಗೆ ಕೇದಾರನಾಥ ಜಿಯಲ್ಲಿ ಅವಳ ತಂಗಲು ಆರಾಮದಾಯಕ ವ್ಯವಸ್ಥೆ ಮಾಡಿದರು. ಈ ಘಟನೆಯು ತಾಯಿಯ ಮೇಲೆ ಆಳವಾದ ಪ್ರಭಾವ ಬೀರಿತು. ನಂತರ ಅವಳು ನನ್ನನ್ನು ಭೇಟಿಯಾದಾಗ, “ಜನರು ಒಳ್ಳೆಯತನದಲ್ಲಿ ಗುರುತಿಸುವಂತೆ ನೀನು ಒಳ್ಳೆಯ ಕೆಲಸವನ್ನು ಮಾಡಿದ್ದೀಯ ಎಂದು ತೋರುತ್ತದೆ ಎಂದಿದ್ದಳು” ಅಮ್ಮನ ಈ ಪ್ರಶಂಸೆಗಿಂತ ಮತ್ತಿನ್ನೇನು ಬೇಕು?.
ಇಂದು, ಹಲವು ವರ್ಷಗಳ ನಂತರ, ನಿಮ್ಮ ಮಗ ದೇಶದ ಪ್ರಧಾನಿಯಾಗಿದ್ದಾರೆಂದು ಹೆಮ್ಮೆಪಡುತ್ತೀರಾ ಎಂದು ಜನರು ಅಮ್ಮನ ಕೇಳಿದಾಗಲೆಲ್ಲಾ, ಅಮ್ಮ ಅತ್ಯಂತ ಮಾರ್ಮಿಕ ಪ್ರತಿಕ್ರಿಯೆಯನ್ನು ನೀಡುತ್ತಾಳೆ.  “ಹೌದಪ್ಪಾ.. ನನಗೂ ನಿನ್ನಂತೆಯೇ ಹೆಮ್ಮೆ ಇದೆ. ಆದರೆ ಯಾವುದೂ ನನ್ನದಲ್ಲ. ನಾನು ದೇವರ ಯೋಜನೆಗಳಲ್ಲಿ ಕೇವಲ ಸಾಧನವಾಗಿದ್ದೇನೆ” ಎನ್ನುತ್ತಾಳೆ.
ಜೀವನದಲ್ಲಿ ಅಮ್ಮ ಯಾವುದರ ಬಗ್ಗೆಯೂ ದೂರುವುದನ್ನು ನಾನು ಕೇಳಿಲ್ಲ. ಅವಳು ಯಾರ ಬಗ್ಗೆಯೂ ದೂರುವುದಿಲ್ಲ ಅಥವಾ ಯಾರಿಂದಲೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಇಂದಿಗೂ ಅಮ್ಮನ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಅವಳು ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅದರಲ್ಲಿ ಅವಳಿಗೆ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವಳು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿದ್ದಾಳೆ.
ನಾನು ಮನೆಯಿಂದ ಹೊರಡಲು ನಿರ್ಧರಿಸಿದಾಗ, ನಾನು ಅವಳಿಗೆ ಹೇಳುವ ಮೊದಲೇ ನನ್ನ ನಿರ್ಧಾರವನ್ನು ಗ್ರಹಿಸಿದ್ದಳು. ನಾನು ಹೊರಗೆ ಹೋಗಿ ಜಗತ್ತನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಎಂದು ನಾನು ಆಗಾಗ್ಗೆ ನನ್ನ ಹೆತ್ತವರಿಗೆ ಹೇಳುತ್ತಿದ್ದೆ. ನಾನು ಅವರಿಗೆ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳುತ್ತಿದ್ದೆ ಮತ್ತು ನಾನು ರಾಮಕೃಷ್ಣ ಮಿಷನ್ ಮಠಕ್ಕೆ ಭೇಟಿ ನೀಡಲು ಬಯಸುತ್ತೇನೆ ಎಂದು ಸಹ ಹೇಳಿದ್ದೆ. ನನ್ನ ನಿರ್ಧಾರವನ್ನು ಅವರು ಅರ್ಥ ಮಾಡಿಕೊಂಡಿದ್ದರು.
ಅಂತಿಮವಾಗಿ, ನಾನು ಮನೆಯಿಂದ ಹೊರಡುವ ನನ್ನ ಆಸೆಯನ್ನು ಬಹಿರಂಗಪಡಿಸಿದೆ ಮತ್ತು ಅವರ ಆಶೀರ್ವಾದವನ್ನು ಕೇಳಿದೆ. ನನ್ನ ತಂದೆ ತುಂಬಾ ನಿರಾಶೆಗೊಂಡರು, ಮತ್ತು ಬೇಸರದಿಂದ “ನಿನ್ನ ಇಚ್ಛೆಯಂತೆ” ಮಾಡು ಎಂದಿದ್ದರು. ಆದರೆ ಅವರ ಆಶೀರ್ವಾದವಿಲ್ಲದೆ ನಾನು ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದೆ. ಆದರೆ, ಅಮ್ಮ ನನ್ನ ಆಸೆಗಳನ್ನು ಅರ್ಥಮಾಡಿಕೊಂಡರು ಮತ್ತು “ನಿನ್ನ ಮನಸ್ಸು ಹೇಳುವಂತೆ ಮಾಡು” ಎಂದು ಆಶೀರ್ವದಿಸಿದರು. ಅಷ್ಟೊತ್ತಿಗಾಗಲೇ ನನ್ನ ತಂದೆ ಕೂಡ ನನ್ನ ನಿರ್ಧಾರಕ್ಕೆ ಮಣಿದು ಆಶೀರ್ವಾದ ಮಾಡಿದ್ದರು. ಆದರೆ ನಾನು ಹೊರಟಾಗ ತಡೆಯಲಾಗದೆ ಕಣ್ಣೀರು ಹಾಕಿದ್ದಳು. ಆದರೆ ಅದರಲ್ಲಿ ನನ್ನ ಭವಿಷ್ಯಕ್ಕಾಗಿ ಅಪಾರ ಆಶೀರ್ವಾದಗಳು ಇದ್ದವು.
ಗುಜರಾತಿನ ಮುಖ್ಯಮಂತ್ರಿ ನಾನು ಎಂದು ನಿರ್ಧರಿಸಿದ್ದು ತಿಳಿದ ತಕ್ಷಣ, ನಾನು ನೇರವಾಗಿ ತಾಯಿಯನ್ನು ಭೇಟಿ ಮಾಡಲು ಹೋದೆ. ಅವಳು ಅತ್ಯಂತ ಭಾವಪರವಶಳಾಗಿದ್ದಳು. ನಂತರ ಅವಳು ನನಗೆ ಹೇಳಿದಳು, “ನನಗೆ ಸರ್ಕಾರದಲ್ಲಿ ನಿನ್ನ ಕೆಲಸ ಅರ್ಥವಾಗುತ್ತಿಲ್ಲ, ಆದರೆ ನೀನು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದು ನಾನು ಬಯಸುತ್ತೇನೆ.” ಆ ಮಾತುಗಳಿ ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ.
ನಾನು ದೆಹಲಿಗೆ ತೆರಳಿದ ನಂತರ, ಅವರೊಂದಿಗಿನ ಭೇಟಿಗಳು ಮೊದಲಿಗಿಂತ ಕಡಿಮೆಯಾಗಿದೆ. ಭೇಟಿಯಾದಾಗ ಕೇಳುತ್ತಾಳೆ “ನೀನು ದೆಹಲಿಯಲ್ಲಿ ಸಂತೋಷವಾಗಿದ್ದೀಯಾ? ನಿನಗೆ ಇಷ್ಟವಿದೆಯಾ?” ಫೋನ್‌ನಲ್ಲಿ ಮಾತನಾಡುವಾಗ ಹೇಳುತ್ತಾಳೆ “ಯಾರೊಂದಿಗೂ ಯಾವುದೇ ತಪ್ಪು ಅಥವಾ ಕೆಟ್ಟದ್ದನ್ನು ಮಾಡಬೇಡ. ಬಡವರಿಗಾಗಿ ಕೆಲಸ ಮಾಡು.”
ನಾನು ನನ್ನ ಹೆತ್ತವರ ಜೀವನವನ್ನು ಹಿಂತಿರುಗಿ ನೋಡಿದರೆ, ಅವರ ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಅವರ ದೊಡ್ಡ ಗುಣಗಳಾಗಿವೆ. ಬಡತನ ಮತ್ತು ಅದರ ಜೊತೆಗಿರುವ ಸವಾಲುಗಳ ಹೊರತಾಗಿಯೂ, ನನ್ನ ಪೋಷಕರು ಎಂದಿಗೂ ಪ್ರಾಮಾಣಿಕತೆಯ ಹಾದಿಯನ್ನು ಬಿಡಲಿಲ್ಲ ಅಥವಾ ತಮ್ಮ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಂಡಿಲ್ಲ. ಯಾವುದೇ ಸವಾಲನ್ನು ಜಯಿಸಲು ಅವರಿಗೆ ಒಂದೇ ಒಂದು ಮಂತ್ರವಿದೆ – ಕಠಿಣ ಪರಿಶ್ರಮ, ನಿರಂತರ ಪರಿಶ್ರಮ!
ಅಮ್ಮ ನಿನ್ನ ಜೀವನವೊಂದು ಅದ್ಭುತ ಕಥೆ,
ನಿನ್ನ ಪ್ರತಿ ಹೋರಾಟ ದೊಡ್ಡದು, ಬಲವಾದ ಸಂಕಲ್ಪ ಸ್ಫೂರ್ತಿದಾಯಕ.
ಅಮ್ಮಾ, ನಿಮಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!