ಆದರ್ಶಮಯವಾದ ತಾಯಿ-ಮಗನ ಸಂಬಂಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ನಿಧನಕ್ಕೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ, ಪ್ರಧಾನಿ ಮೋದಿಯವರು ಹಾಗೂ ಪೂಜ್ಯ ತಾಯಿ ಹೀರಾಬೇನ್ ಅವರದು ಆದರ್ಶಮಯವಾದ ತಾಯಿ ಮಗನ ಸಂಬಂಧವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ತಮ್ಮ ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ತಾಯಿ ನಿಧನ ನಮಗೆಲ್ಲರಿಗೂ ದು:ಖದ ಸಂಗತಿಯಾಗಿದೆ. ಪ್ರಧಾನಿ ಮೋದಿಯವರು ತೋರಿಸಿರುವ ಗೌರವ, ಪ್ರೀತಿ ಅನನ್ಯವಾದುದು. ಹೀರಾಬೇನ್ ತಾಯಿ ಮಗನಿಗೆ ತೋರಿಸಿರುವ ಪ್ರೀತಿ ವಾತ್ಸಲ್ಯವನ್ನು ನಾವೆಲ್ಲ ನೋಡಿದ್ದೇವೆ. ತಾಯಿ ಬಹಳ ಸರಳ, ಆದರೆ ಅಷ್ಟೇ ವಿಶೇಷ ಎಂದು ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಇಡೀ ದೇಶಕ್ಕೆ ಆದರ್ಶಮಯವಾದ ತಾಯಿ ಮತ್ತು ಮಗನ ಸಂಬಂಧವಾಗಿತ್ತು. ಆ ತಾಯಿ ಎಂದೂ ಕೂಡ ಮಗ ಯಾವುದೇ ಹುದ್ದೆಯಲ್ಲಿದ್ದರೂ, ಮಗನಾಗಿಯೇ ನೋಡಿದ್ದಾರೆಯೇ ಹೊರತು , ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ನೋಡಿರಲಿಲ್ಲ. ಇದು ಆ ತಾಯಿಯ ತಾಯ್ತನ ತೋರಿಸುತ್ತದೆ. ಅವರು ತನ್ನ ಕರ್ತವ್ಯವನ್ನು ಮಾಡಿ ನರೇಂದ್ರ ಮೋದಿಯವರಿಗೆ ಆದರ್ಶ, ತತ್ವನಿಷ್ಠೆ, ದೇಶಭಕ್ತಿಯನ್ನು ತುಂಬಿದ್ದಾರೆ. ಅವೆಲ್ಲ ಗುಣಗಳು ಮೋದಿಯವರಲ್ಲಿ ನೋಡುತ್ತಿದ್ದೇವೆ ಎಂದರು.

ಇಳಿವಯಸ್ಸಿನಲ್ಲಿಯೂ ಕರ್ತವ್ಯ ಪಾಲನೆ :

ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಹೀರಾಬೆನ್ ಊಟ ಮಾಡಿಸಿದ್ದಾರೆ. ಹಣವನ್ನೂ ನೀಡಿದ್ದಾರೆ. ತಾಯಿಯಾಗಿ ತನ್ನ ಕರ್ತವ್ಯವನ್ನು ಇಳಿ ವಯಸ್ಸಿನಲ್ಲಿಯೂ ಕೂಡ ಅವರು ಮರೆತಿರಲಿಲ್ಲ. ತಾಯಿ ಮಕ್ಕಳ ಸಂಬಂಧ,ಅಣ್ಣ ತಮ್ಮಂದಿರ ಸಂಬಂಧ, ಅಕ್ಕತಂಗಿಯರ ಸಂಬಂಧ ಈ ದೇಶದ ಪರಂಪರೆ ಹಾಗೂ ಸಂಸ್ಕೃತಿ. ಈ ಸಂಬಂಧಗಳಲ್ಲಿ ನಮ್ಮ ದೇಶದ ಐಕ್ಯತೆ ಇದೆ. ಹೀರಾಬೇನ್ ಅವರು ಆದರ್ಶ ತಾಯಿಯಾಗಿ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಅಂತೆಯೇ ಒಬ್ಬ ಆದರ್ಶ ಮಗನಾಗಿ ನರೇಂದ್ರ ಮೋದಿಯವರು ದೇಶದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.

ತಾಯಿ-ಮಗ ಇಬ್ಬರೂ ಕರ್ಮಯೋಗಿಗಳು
ಮೋದಿಯವರು ಸಂತಾಪ ಸಂದೇಶದಲ್ಲಿ ತಾಯಿಯನ್ನು ಕರ್ಮಯೋಗಿ ಎಂದು ಬಣ್ಣಿಸಿದ್ದರು. ನರೇಂದ್ರ ಮೋದಿಯವರೂ ಕರ್ಮಯೋಗಿಯಾಗಿದ್ದಾರೆ. ತಾಯಿಯವರ ಕೊನೆಯ ಕರ್ಮಗಳನ್ನು ಮಗನಾಗಿ ಮಾಡುತ್ತಿದ್ದಾರೆ. ಅದರ ನಂತರ ಯಥಾಪ್ರಕಾರ ತಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಗವಹಿಸಲಿದ್ದಾರೆ. ಇದು ನರೇಂದ್ರ ಮೋದಿಯವರ ಕರ್ತವ್ಯ ಪ್ರಜ್ಞೆಯನ್ನು ಬಿಂಬಿಸುತ್ತದೆ. ತಾಯಿ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಈ ದು:ಖವನ್ನು ಭರಿಸುವ ಶಕ್ತಿಯನ್ನು ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!