ಹೊಸದಿಗಂತ ಡಿಜಿಟಲ್ ಡೆಸ್ಕ್:
ತಲೆಯ ಮೇಲೆ ಸೂರಿಲ್ಲದ ಕುಟುಂಬಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಉಚಿತವಾಗಿ ಮನೆಗಳನ್ನು ಕಟ್ಟಿಕೊಟ್ಟಿದೆ.
ಉಡುಪಿ ಜಿಲ್ಲೆಯ ಜನ್ನಾಡಿ ಮತ್ತು ಮಣಿಗೇರಿ ಕೊರಗರ ಕಾಲೋನಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 14 ಉಚಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಇತ್ತೀಚೆಗಷ್ಟೇ ಗೃಹಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಗಿದೆ.
ಉಡುಪಿ ಪೇಜಾವರ ಶ್ರೀ ಅಧೋಕ್ಷಜ ತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೃಹಪೂಜೆ ನೆರವೇರಿಸಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ. ಎಚ್.ಎಸ್. ಶೆಟ್ಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಮ ರಾಜ್ಯದಲ್ಲಿ ರಾಮನಿಗೆ ಮಂದಿರ ಮಾಡಿದರೆ ಸಾಲದು. ಪ್ರಜೆಗಳಿಗೂ ಮಂದಿರ ನಿರ್ಮಾಣಗೊಂಡಾಗ ರಾಮರಾಜ್ಯದ ಕನಸು ನಸಾಗುತ್ತದೆ. ಅಂತಹಾ ಕನಸನ್ನು ಡಾ.ಹೆಚ್.ಎಸ್.ಶೆಟ್ಟಿ ಕಂಡುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ತಗಡಿನ ಮನೆಯಲ್ಲಿ ಕಾಲಕಳೆಯುತ್ತಿದ್ದೆವು, ಆದರೆ ನಮ್ಮ ಕುಟುಂಬದ ಸ್ಥಿತಿ ಕಂಡು ಶೆಟ್ಟಿ ಅವರು ಮರುಗಿದ್ದಾರೆ. ಕರೆಂಟು, ಫ್ಯಾನ್, ನೀರು ಎಲ್ಲ ಇರುವ ಚಂದದ ಮನೆಯಲ್ಲಿ ಈಗ ನಾವು ವಾಸವಿದ್ದೇವೆ. ಅವರಿಗೆ ನಾವು ಋಣಿಯಾಗಿರುತ್ತೇವೆ. ಅವರಿಗೆ ದೇವರು ಪುಣ್ಯ ನೀಡಲಿ, ನಮ್ಮಂಥ ನೂರಾರು ಜನಕ್ಕೆ ಸಹಾಯ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮನೆ ಪಡೆದುಕೊಂಡ ದಂಪತಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇದೆ ಸಂದರ್ಭ ಸಚಿವ ಮುನಿಯಪ್ಪ, ಮನೆ ನಿರ್ಮಿಸಿಕೊಟ್ಟ ಗುತ್ತಿಗೆದಾರ ಉದಯಕುಮಾರ್ ಶೆಟ್ಟಿ ಕೊಯ್ಕಾಡಿರವರನ್ನು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಮಾಜೀ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಪರಿಶಿಷ್ಟಜಾತಿ ಮತ್ತು ಬುಡಕಟ್ಟು ಉಪಯೋಜನೆ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಊರ್ಮಿಳ ಬಿ., ಕೊರಗಾಭಿವೃದ್ಧಿ ಸಂಸ್ಥೆಗಳು, ಕರ್ನಾಟಕ ಮತ್ತು ಕೇರಳ ರಾಜ್ಯ ಇದರ ಅಧ್ಯಕ್ಷೆ ಸುಶೀಲ ನಾಡ, ರಾಜಕೀಯ ಮುಖಂಡದಿನೇಶ ಹೆಗ್ಡೆ ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ದೀಪಾ ಶೆಟ್ಟಿ, ಹಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಎಚ್.ಶಂಕರ ಹೆಗ್ಡೆ, ಕೊರಗಾಭಿವೃದ್ಧಿ ಸಂಸ್ಥೆ ಕುಂದಾಪುರ ವಲಯದ ಅಧ್ಯಕ್ಷ ಕುಮಾರ್ ದಾಸ್, ಗುರುನಾಥ್ ದಾನಪ್ಪ ಮೊದಲಾದವರು ಉಪಸ್ಥಿತರಿದ್ದರು. ಮುರಳಿ ಕಡೆಕಾರ್ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.