September 30, 2026
Wednesday, September 30, 2026
spot_img

ಕೀನ್ಯಾದಲ್ಲಿ ಹೆಲಿಕಾಪ್ಟರ್ ಪತನ: ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ ಸೇರಿ 7 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯ ಕೀನ್ಯಾದ ಸಾಂಬುರು ಕೌಂಟಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡು ಬೆಂಕಿಗಾಹುತಿಯಾಗಿದೆ. ನೈರೋಬಿಯ ಉತ್ತರದ ಲೊಯಿಸಾಬಾ ವನ್ಯಜೀವಿ ಅಭಯಾರಣ್ಯದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಣಿಸುತ್ತಿದ್ದ ಎಲ್ಲಾ 7 ಜನರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪ್ರಮುಖ ಗಣ್ಯರ ದಾರುಣ ಅಂತ್ಯ

ಈ ದುರಂತದಲ್ಲಿ ಈಕ್ವೆಡಾರ್ ದೇಶದ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥ, 42 ವರುಷದ ಮೈಕೆಲ್ ಸೆನ್ಸಿ-ಕಾಂಟುಗಿ ಹಾಗೂ ಅವರ ಪತ್ನಿ ಸ್ಟೆಫನಿ ಸಾವನ್ನಪ್ಪಿದ್ದಾರೆ. ಮೈಕೆಲ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರ ನಿಕಟವರ್ತಿಯಾಗಿದ್ದರು. ಇವರೊಂದಿಗೆ ‘ಟೆಲಿಮುಂಡೋ’ ಮತ್ತು ‘ಎನ್‌ಬಿಸಿ ಯುನಿವರ್ಸಲ್’ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಜೋಸ್ ಆಲ್ಬರ್ಟೊ ಸುವಾರೆಜ್ ಸೇರಿದಂತೆ ಐವರು ಅಮೆರಿಕನ್ ಪ್ರಜೆಗಳು ಹಾಗೂ ಓರ್ವ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ಸ್ಥಳ ಮತ್ತು ರಕ್ಷಣಾ ಸವಾಲುಗಳು

ಸಮುದ್ರ ಮಟ್ಟದಿಂದ 2,000 ಮೀಟರ್ ಎತ್ತರದಲ್ಲಿರುವ ‘ಮೌಂಟ್ ಓಲೋಲೋಕ್ವೆ’ ಬೆಟ್ಟದ ಬುಡದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಆವರಿಸಿತ್ತು. ಕಡಿದಾದ ಬೆಟ್ಟಗಳು, ಬಂಡೆಗಳು ಹಾಗೂ ರಾತ್ರಿಯ ಕತ್ತಲೆಯ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮೃತದೇಹಗಳನ್ನು ಹೊರತೆಗೆಯುವ ಪ್ರಕ್ರಿಯೆ ಮುಂದುವರಿದಿದೆ. ಹೆಲಿಕಾಪ್ಟರ್ ಪತನಕ್ಕೆ ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷ ಕಾರಣವೇ ಎಂಬುದನ್ನು ತಿಳಿಯಲು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ ಮತ್ತು ವಿಮಾನ ಅಪಘಾತ ತನಿಖಾ ವಿಭಾಗ ಶೀಘ್ರ ತನಿಖೆ ಆರಂಭಿಸಿವೆ.

Must Read