ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ಅನೇಕ ಜನರು ಸಾವನ್ನಪ್ಪುತ್ತಿದ್ದು, ಹೀಗಾಗಿ ದ್ವಿಚಕ್ರ ವಾಹನ ತಯಾರಕರು ವಾಹನವನ್ನು ಖರೀದಿಸುವವರಿಗೆ ರಿಯಾಯಿತಿ ಅಥವಾ ಸಮಂಜಸವಾದ ದರದಲ್ಲಿ ಹೆಲ್ಮೆಟ್ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
2022ರಲ್ಲಿ ದೇಶದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಅಪಘಾತಗಳಲ್ಲಿ 50,029 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನ ಖರೀದಿಸುವವರಿಗೆ ಹೆಲ್ಮೆಟ್‌ಗಳ ಮೇಲೆ ಸ್ವಲ್ಪ ಕಡಿಮೆ ರಿಯಾಯಿತಿಯನ್ನು ನೀಡಿದರೆ ನಾವು ಜನರ ಜೀವವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ತಯಾರಕರಿಗೆ ವಿನಂತಿಸುತ್ತೇನೆ ಎಂದರು.
ದೇಶದ ಪ್ರತಿ ತಾಲೂಕಿನಲ್ಲಿ ಡ್ರೈವಿಂಗ್ ಸ್ಕೂಲ್ ಆರಂಭಿಸುವ ಮಹತ್ವಾಕಾಂಕ್ಷೆ ಇದೆ ಎಂದರು. ಮೋಟಾರು ವಾಹನಗಳ(ತಿದ್ದುಪಡಿ) ಕಾಯಿದೆ -2019 ಟ್ರಾಫಿಕ್ ಅಪರಾಧಗಳ ಮೇಲೆ ಭಾರಿ ದಂಡವನ್ನು ಜಾರಿಗೊಳಿಸಿದೆ. ಆದರೆ ವಾಸ್ತವವಾಗಿ, ಪರಿಣಾಮಕಾರಿ ಜಾರಿ ಕೂಡ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.