ಪ್ರವೀಣ್ ನೆಟ್ಟಾರ್ ಹಂತಕರ ಪತ್ತೆಗೆ ಕೇರಳ ಪೊಲೀಸರ ನೆರವು: ಗೃಹ ಸಚಿವ ಆರಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಕೇರಳ ಪೊಲೀಸರ ನೆರವು ಪಡೆಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 15 ಜನರನ್ನು ವಶಕ್ಕೆ ಪಡೆಯಲಾಗಿದೆ, ವಿಚಾರಣೆ ತೀವ್ರಗೊಂಡಿದೆ ಎಂದರು.

ಹಂತಕರು ಬಳಸಿದ ಬೈಕ್ ಕೇರಳದ ಕಾಸರಗೋಡಿನ ನೋಂದಣಿ ಸಂಖ್ಯೆ ಹೊಂದಿದೆ. ಈ ನಿಟ್ಟಿನಲ್ಲಿ ಕೇರಳ ಪೊಲೀಸರ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕೇರಳ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ನಾವು ಅಸಹಾಯಕರಲ್ಲ, ನಮ್ಮ ಸರ್ಕಾರ ಅಸಹಾಯಕವಾಗಿಲ್ಲ. ನೋವು, ಆಕ್ರೋಶದಿಂದ‌ ಅನೇಕ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದಾರೆ, ಕರಾವಳಿಯ ಗಡಿಭಾಗ ಕೇರಳದಿಂದ ಬಂದು ಕೊಲೆಗಡುಕರು ಕುಕೃತ್ಯ ಎಸಗುವ ಘಟನೆ ಹಲವು ಬಾರಿ ನಡೆದಿದೆ. ಈ ಬಗ್ಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ದಕ್ಷಿಣ ಕನ್ನಡ ಸಹಜ ಸ್ಥಿತಿಗೆ ಮರಳುತ್ತಿದೆ. ಸೂತಕದ ಛಾಯೆ ಇರುವಾಗ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಿಸಿದ್ದಾರೆ. ಜನೋತ್ಸವ ಕಾರ್ಯಕ್ರಮ ರದ್ದುಮಾಡುವ ತೀರ್ಮಾನ ಮಾಡಿರುವುದು ಪ್ರಶಂಸನೀಯ ಎಂದೂ ಅವರು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!