ಹೊಸದಿಗಂತ ವರದಿ,ಶಿವಮೊಗ್ಗ:
ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ಸಮೀಪದ ಕೆಸಲೂರು ಎಂಬಲ್ಲಿ ಚಿರತೆ ಹಿಂಡು ಪತ್ತೆಯಾಗಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಭಾನುವಾರ ರಾತ್ರಿ ಬನಶಂಕರಿ ದೇವಾಲಯದ ಬಳಿ ಮೂರು ಚಿರತೆ ಮರಿ ಪತ್ತೆಯಾಗಿದ್ದು ದೊಡ್ಡ ತಾಯಿ ಚಿರತೆ ಇದೆ ಎನ್ನುವ ಮಾತು ಕೂಡ ಕೇಳಿಬಂದಿದೆ. ಇದಲ್ಲದೆ ಸೋಮವಾರ ಮಿಗೇರಿ ಎಂಬಲ್ಲಿ ಮನೆಯಲ್ಲಿ ನಾಯಿಯನ್ನು ಎಳೆದುಕೊಂಡು ಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಿರತೆ ಇರುವ ವಿಷಯ ತಿಳಿದ ಸಾರ್ವಜನಿಕರು ನಡೆದುಕೊಂಡು ಓಡಾಡಲು ಭಯ ಪಡುವಂತಾಗಿದ್ದು ಈಗ ಮಲೆನಾಡಿನಲ್ಲಿ ಅಡಿಕೆ ಸುಲಿತದ ಸಮಯವಾಗಿದ್ದರಿಂದ ರೈತರು ಕೂಡ ಆತಂಕದಲ್ಲಿದ್ದಾರೆ. ಚಿರತೆ ಭಯದಿಂದ ಜನರು ಈಗ ಅನಿವಾರ್ಯವಾಗಿ ವಾಹನಗಳಲ್ಲೇ ಓಡಾಡುವ ಪರಿಸ್ಥಿತಿ ಇದ್ದು ಎಲ್ಲರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ತಕ್ಷಣ ಗ್ರಾಮಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿ ಬೋನ್ ಇಟ್ಟು ಚಿರತೆ ಹಿಡಿಯಬೇಕು ಎಂದು ಆ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.