– ನಿತೀಶ ಡಂಬಳ
ಪಕ್ಷಿಸಂಕುಲ ವನ್ಯಧಾಮದ ಅವಿಭಾಜ್ಯ ಅಂಗ. ಎಲ್ಲಿಯೂ ಸ್ಥಾಯಿ ನೆಲೆ ಹೊಂದದೆ ವರ್ಷ ಪೂರ್ತಿ ಸಂಚರಿಸುವ ಪಕ್ಷಿಗಳು ಅನೇಕ ಪಕ್ಷಿಧಾಮಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಮುತುವರ್ಜಿಯಿಂದ ಹಲವು ಪಕ್ಷಿಧಾಮಗಳು ನಾಡಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಅಂತಃ ಹಲವು ಪಕ್ಷಿಧಾಮಗಳ ಮಾಹಿತಿ ಇಲ್ಲಿದೆ ನೋಡಿ:
ಗುಡವಿ ಪಕ್ಷಿಧಾಮ
ಶಿವಮೊಗ್ಗ ಜಿಲ್ಲೆಯ ಗುಡವಿ ಕೆರೆಗೆ ಹೊಂದಿಕೊಂಡಿರುವ ಈ ಪಕ್ಷಿಧಾಮ, 1989ರಲ್ಲಿ ಅಭಯಾರಣ್ಯವೆಂದು ಘೋಷಿತಗೊಂಡಿದೆ. ಈ ಪ್ರದೇಶದಲ್ಲಿ 200 ಜಾತಿಗಳ ಪಕ್ಷಿಗಳು ಕಂಡುಬರುತ್ತವೆ. ಕಪ್ಪು ತಲೆಯ ಬಿಳಿ ಐಬಿಸ್, ಬೂದು ಹೆರಾನ್, ಚಿಕ್ಕ ನೀರುಕಾಗೆ, ನೇರಳೆ ಹೆರಾನ್, ಬಾತುಗಳ ಕಂಡುಬಂದು, 8 ಸಾವಿರ ಐಬಿಸ್ಗಳು ಪ್ರತಿವರ್ಷ ಇಲ್ಲಿಗೆ ಬರುತ್ತವೆ. ಪಕ್ಷಿಧಾಮದಲ್ಲಿ ಉಪವನ, ವೀಕ್ಷಣಾಗೋಪುರವಿದೆ.
ಅಂತರ: ಶಿವಮೊಗ್ಗದ ಸಾಗರದಿಂದ 30 ಕಿ.ಮೀ. ಹಾಗೂ ಸೊರಬದಿಂದ 12 ಕಿ.ಮೀ. ದೂರದಲ್ಲಿದೆ.
ಅತ್ತಿವೇರಿ ಪಕ್ಷಿಧಾಮ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡನಲ್ಲಿರುವ ಅತ್ತಿವೇರಿ ಪಕ್ಷಿಧಾಮ ತಾಯವ್ವನ ಹಳ್ಳಕ್ಕೆ ಹೊಂದಿಕೊಂಡಿದೆ. 2000ರಲ್ಲಿ ಅತ್ತಿವೇರಿಯನ್ನು ಅಭಯಾರಣ್ಯವೆಂದು ಘೋಷಿಸಲಾಯಿತು. ನೀರುಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿಗೆ ಬರುತ್ತವೆ. ಕೊಳದ ಹೆರಾನ್, ಡಾರ್ಟರ್, ತೆರೆದ ಕೊಕ್ಕಿನ ಸ್ಟಾರ್ಕ, ಚಮಚೆಕೊಕ್ಕು, ಲ್ಯಾಪ್ವಿಂಗ್, ಶಿಕ್ರ, ಗರುಡ, ಬ್ರಾಹ್ಮಣಿ ಕೈಟ್ ಹದ್ದು ಇಲ್ಲಿ ಕಾಣಸಿಗುತ್ತವೆ. ನವೆಂಬರ್ದಿಂದ ಮಾರ್ಚವರೆಗೆ ಇಲ್ಲಿಗೆ ಹೋಗಲು ಸೂಕ್ತ ಸಮಯ.
ಅಂತರ: ಮುಂಡಗೋಡದಿಂದ 17 ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ 45 ಕೀ.ಮೀ. ದೂರವಿದೆ.
ಘಟಪ್ರಭಾ ಪಕ್ಷಿಧಾಮ
ಬೆಳಗಾವಿ ಜಿಲ್ಲೆ ಗೋಕಾಕಿನಲ್ಲಿರುವ ಘಟಪ್ರಭಾ ಪಕ್ಷಿಧಾಮ 1974ರಲ್ಲಿ ಅಭಯಾರಣ್ಯವೆಂದು ಘೋಷಿಸಲ್ಪಿಟ್ಟಿತು. ಭಾರತದ ನೀರುಹಕ್ಕಿಗಳು ಇಲ್ಲಿನ ಕಿರುದ್ವೀಪಗಳಲ್ಲಿ ಜೂನ್-ಅಕ್ಟೋಬರ್ ಹಾಗೂ ವಿದೇಶಿ ಹಕ್ಕಿಗಳು ನವೆಂಬರ್-ಫೆಬ್ರವರಿ ಅವಧಿಯಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಯುರೇಷಿಯಾದ ಜೌಗು ಹ್ಯಾರಿಯರ್, ಕಾಡಿನ ಸ್ಯಾಂಡ್ಪೈಪರ್, ಬೂದು ನೆತ್ತಿಂಗ, ಭಾರತದ ರಾಬಿನ್, ಕಾಪರ್ ಸ್ಮಿತ್ ಬಾರ್ಬೆಟ್, ದುಂಬಿಬಾಕ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.
ಅಂತರ: ಗೋಕಾಕನಿಂದ 15 ಕಿ.ಮೀ. ಅಂತರದಲ್ಲಿದೆ.
ಆದಿಚುಂಚನಗಿರಿ ನವಿಲುಧಾಮ
ಮಂಡ್ಯ ಜಿಲ್ಲೆಯ ಈ ನವಿಲುಧಾಮ 1981ರಲ್ಲಿ ನವಿಲುಗಳನ್ನು ಸಂರಕ್ಷಿಸಲು ಸ್ಥಾಪಿಸಲಾಯಿತು. ಈ ಪ್ರದೇಶ ಕುರುಚಲು ಮತ್ತು ಮುಳ್ಳು ಕಾಡುಗಳಿಂದ ಕೂಡಿದ್ದು ನವಿಲುಗಳ ಆವಾಸಕ್ಕೆ ಸೂಕ್ತವಾಗಿದೆ. ಬೂದು ಫ್ರಾಂಕೋಲಿನ್, ಹಸಿರು ದುಂಬಿಬಾಕ, ಶ್ರೈಕ್ ಮೊದಲಾದ ಪಕ್ಷಿಗಳು ಕಾಣಸಿಗುತ್ತವೆ.
ಅಂತರ: ಮಂಡ್ಯದಿಂದ 68 ಕಿ.ಮೀ. ಹಾಗೂ ನಾಗಮಂಗಲದಿಂದ 25 ಕಿ.ಮೀ. ದೂರದಲ್ಲಿದೆ.
ಬಂಕಾಪುರ ನವಿಲು ರಕ್ಷಿತಾರಣ್ಯ
ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಇದು 2006ರಲ್ಲಿ ರಕ್ಷಿತಾರಣ್ಯವೆಂದು ಘೋಷಿಸಲ್ಪಟ್ಟಿದೆ. ಸುತ್ತಲಿನ ಹೊಲಗಳಿಂದ ಆಹಾರ ಪಡೆಯುವ ನವಿಲುಗಳು ಬಂಕಾಪುರ ಕೋಟೆಯ ಕಂದಕಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ನವಿಲು ಜೊತೆಗೆ ಬೂದು ನೆತ್ತಿಂಗ, ರಾಬಿನ್, ಬಾರ್ಬೆಟ್ ಇತರ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.
ಅಂತರ: ಶಿಗ್ಗಾವಿಯಿಂದ 10 ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ 55 ಕಿ.ಮೀ. ದೂರದಲ್ಲಿದೆ.
ಮಾಗಡಿ ಕೆರೆ ಪಕ್ಷಿಧಾಮ
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಪಕ್ಷಿಧಾಮ. ಮಾನವ ನಿರ್ಮಿತ ಇಲ್ಲಿನ ಕೆರೆಗೆ ಚಳಿಗಾಲದಲ್ಲಿ ಹಲವಾರು ಪಕ್ಷಿಗಳು ವಲಸೆ ಬರುತ್ತವೆ. ಮುಖ್ಯವಾಗಿ ಮಂಗೋಲಿಯಾದಿಂದ ಬರುವ ಅಪರೂಪ ಪಟ್ಟಿ ತಲೆಯ ಗೂಸ್ಗಳು, ಬೂದಿ ಮೂರ್ಹೆನ್, ಬೆಳ್ಳಕ್ಕಿ, ರಾಜಹಂಸ, ಡ್ರೋಂಗೋ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ. ಪಕ್ಷಿವೀಕ್ಷಣೆಗೆ ವೀಕ್ಷಣಾ ಗೋಪುರವಿದೆ. ನವೆಂಬರ್ನಿಂದ ಫೆಬ್ರವರಿವರೆಗೆ ಇಲ್ಲಿಗೆ ಬರಲು ಸೂಕ್ತ ಕಾಲ.
ಅಂತರ: ಶಿರಹಟ್ಟಿಯಿಂದ 7 ಕಿ.ಮೀ. ಹಾಗೂ ಗದಗನಿಂದ 29 ಕಿ.ಮೀ. ದೂರದಲ್ಲಿದೆ.
ಇದಲ್ಲದೆ ಮಂಡ್ಯದ ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆಬೆಳ್ಳೂರು ಪಕ್ಷಿಧಾಮ, ಶಿವಮೊಗ್ಗದ ಮಂಡಗದ್ದೆ ಪಕ್ಷಿಧಾಮ, ತುಮಕೂರಿನ ಕಗ್ಗಲಡು ಪಕ್ಷಿಧಾಮಗಳು ಸಹ ದೇಶಿ-ವಿದೇಶ ಹಕ್ಕಿಗಳಿಗೆ ಆಶ್ರಯ ತಾಣವಾಗಿವೆ. ಮತ್ತೇಕೆ ತಡ, ಶೀಘ್ರವೆ ನಿಮ್ಮ ಹತ್ತಿರದ ಪಕ್ಷಿಧಾಮಕ್ಕೆ ಭೇಟಿ ನೀಡಿ, ಪ್ರಕೃತಿ ಸೊಬಗನು ಆಹ್ಲಾದಿಸಿ.