July 22, 2026
Wednesday, July 22, 2026
spot_img

ಓಯ್ ಅಂಧೇರೇ ಸನ್‌ಸ್ಕ್ರೀನ್ ಹಚ್ಚಿದ್ಯಾ?: ಅರ್ಷದೀಪ್ ‘ತಮಾಷೆ’ಗೆ ಕ್ರಿಕೆಟ್ ಪ್ರೇಮಿಗಳು ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಅತ್ಯಂತ ರೋಚಕತೆಯೊಂದಿಗೆ ಸಾಗುತ್ತಿರು ವ ಬೆನ್ನಲ್ಲೇ, ಮೈದಾನದ ಹೊರಗಿನ ವಿವಾದವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಮೈಬಣ್ಣದ ಆಧಾರದ ಮೇಲೆ ಹೀಯಾಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್ ತಮ್ಮ ಅಧಿಕೃತ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ ಪಂಜಾಬಿ ಭಾಷೆಯಲ್ಲಿ “ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ?”ಎಂದು ಕೇಳಿದ್ದಾರೆ. ಇಲ್ಲಿ ‘ಅಂಧೇರೇ’ ಎಂಬ ಪದವನ್ನು ಜನಾಂಗೀಯ ನಿಂದನೆ ಅಥವಾ ಮೈಬಣ್ಣವನ್ನು ಕೀಳಾಗಿ ಕಾಣುವ ಅರ್ಥದಲ್ಲಿ ಬಳಸಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಅರ್ಷದೀಪ್ ತಮ್ಮ ಕ್ಯಾಮೆರಾವನ್ನು ಸಹ ಆಟಗಾರ ನಮನ್ ಧೀರ್ ಕಡೆಗೆ ತಿರುಗಿಸಿ, ಅವರೇ ಪಂಜಾಬ್‌ನ ನಿಜವಾದ ‘ನೂರ್’ ಎಂದು ಹೊಗಳಿದ್ದಾರೆ. ಇದು ಪರೋಕ್ಷವಾಗಿ ತಿಲಕ್ ವರ್ಮಾ ಅವರ ಚರ್ಮದ ಬಣ್ಣವನ್ನು ವ್ಯಂಗ್ಯ ಮಾಡಿದಂತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅರ್ಷದೀಪ್ ಸಿಂಗ್ ಅವರ ಈ ಮಾತಿನಿಂದ ತಿಲಕ್ ವರ್ಮಾ ಅವರಿಗೆ ಸಾರ್ವಜನಿಕವಾಗಿ ಮುಜುಗರ ಉಂಟಾಗಿದ್ದರೂ, ಅವರು ಪರಿಸ್ಥಿತಿಯನ್ನು ಅತ್ಯಂತ ಪ್ರಬುದ್ಧತೆಯಿಂದ ನಿಭಾಯಿಸಿದ್ದಾರೆ. ವಿವಾದಕ್ಕೆ ಆಸ್ಪದ ನೀಡದೆ, “ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ” ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾರೆ.

X ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕ್ಲಿಪ್ ವೇಗವಾಗಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಅರ್ಷದೀಪ್ ವರ್ತನೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಡ್ರೆಸ್ಸಿಂಗ್ ರೂಮ್ ಹಾಸ್ಯ ಅಥವಾ ಗೆಳೆತನದ ಹೆಸರಿನಲ್ಲಿ ಇಂತಹ ವರ್ಣಭೇದದ ಕಾಮೆಂಟ್‌ಗಳನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ” ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜವಾಬ್ದಾರಿಯುತ ಆಟಗಾರರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಸೂಕ್ಷ್ಮ ವಿಷಯಗಳ ಕುರಿತು ಕೌನ್ಸಿಲಿಂಗ್ ನೀಡಬೇಕು ಹಾಗೂ ಈ ವರ್ಣಭೇದ ನಿಂದನೆಯ ವಿರುದ್ಧ ಬಿಸಿಸಿಐ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಬಿಗಿಪಟ್ಟು ಹಿಡಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !