ಹೊಸದಿಗಂತ ವರದಿ,ತುಮಕೂರು:
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಕೆಐಎಡಿಬಿ ಹೆಚ್ಚುವರಿ ನಿರ್ದೇಶಕನ ಮನೆ ಹಾಗೂ ಕಚೇರಿ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಶೆಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರಂಹೌಸ್, ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕ) ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ
ದಾಳಿ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್, ರಾಮಕೃಷ್ಣಯ್ಯ, ಇನ್ಸ್‌ಪೆಕ್ಟರ್ ಗಳಾದ ಶಿವರುದ್ರಪ್ಪ ಮೇಟಿ, ಮಹಮ್ಮದ್ ಸಲೀಂ ಸೇರಿ ಇನ್ನಿತರ ಅಧಿಕಾರಿಗಳ ತಂಡ ಪಾಲ್ಗೊಂಡಿದ್ದರು.