October 16, 2026
Friday, October 16, 2026
spot_img

ರಾಜ್ಯ ರಾಜಕೀಯದಲ್ಲಿ ಹೈಕಮಾಂಡ್ ಹೊಸ ಗೇಮ್ ಪ್ಲಾನ್: ಡಿಕೆಶಿ ಸಿಎಂ ಆದ್ರೆ, ಕೆಪಿಸಿಸಿಗೆ ಸಾರಥಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗುತ್ತಿದ್ದಂತೆ, ಪ್ರಸ್ತುತ ಹೊಂದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಯಾರು ಬರಲಿದ್ದಾರೆ ಎಂಬ ಕುತೂಹಲಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯಲು ಮುಂದಾಗಿದೆ.

ಸತೀಶ್ ಜಾರಕಿಹೊಳಿ ಹೆಸರಿಗೆ ಹೈಕಮಾಂಡ್ ಒಲವು

ಪಕ್ಷದ ನಂಬಿಕಸ್ಥ ಮೂಲಗಳ ಪ್ರಕಾರ, ಕೆಪಿಸಿಸಿ ಸಾರಥ್ಯ ವಹಿಸಲು ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿ ಅವರೊಂದಿಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದು, ಸಂಘಟನೆಯ ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಜಾರಕಿಹೊಳಿ ಇಟ್ಟಿರುವ ‘ಡಬಲ್’ ಡಿಮ್ಯಾಂಡ್ ಏನು?

ಹೈಕಮಾಂಡ್ ಆಫರ್ ನೀಡಿದ್ದರೂ, ಸತೀಶ್ ಜಾರಕಿಹೊಳಿ ಅವರು ಪಕ್ಷದ ಮುಂದೆ ಒಂದು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ. ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ನಿಯಮದ ಪ್ರಕಾರ ಸಚಿವ ಸ್ಥಾನ ಬಿಡಲು ಹೈಕಮಾಂಡ್ ಸೂಚಿಸಬಹುದು ಎಂಬ ಮುನ್ಸೂಚನೆ ಅರಿತಿರುವ ಅವರು, ತಮಗೆ ಪ್ರಸ್ತುತ ಇರುವ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನೂ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತುಕತೆ ನಡೆಸಿದ ಸಂದರ್ಭದಲ್ಲೂ ಜಾರಕಿಹೊಳಿ ಇದೇ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಈ ‘ಡಬಲ್ ಪವರ್’ ಡಿಮ್ಯಾಂಡ್‌ಗೆ ದೆಹಲಿ ನಾಯಕರು ಒಪ್ಪಿಗೆ ನೀಡುತ್ತಾರಾ ಅಥವಾ ಸಂಧಾನದ ಮೂಲಕ ಬೇರೆ ಸೂತ್ರವನ್ನು ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Must Read