August 21, 2026
Friday, August 21, 2026
spot_img

1ನೇ ಕ್ಲಾಸ್ ಅಡ್ಮಿಷನ್ ವಯೋಮಿತಿ ಸಡಿಲಿಸಲು ಹೈಕೋರ್ಟ್ ಗಡುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಕನಿಷ್ಠ ವಯೋಮಿತಿ ನಿಗದಿಪಡಿಸಿ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ಕಳೆದ ಮಾರ್ಚ್ 28ರಂದು ಸರ್ಕಾರ ಹೊರಡಿಸಿದ್ದ ವಯೋಮಿತಿ ನಿಯಮವನ್ನು ಪ್ರಶ್ನಿಸಿ ಮಾಸ್ಟರ್ ಕೃಷ್ಣ ಹಾಗೂ ಗಣೇಶ್ ಸೇರಿದಂತೆ ಆರು ಜನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ರಜಾಕಾಲೀನ ಏಕಸದಸ್ಯ ಪೀಠವು, ವಯೋಮಿತಿ ಸಡಿಲಿಕೆ ಕುರಿತು ಒಂದು ವಾರದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

5 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಜಯ್ ಕುಮಾರ್ ಪಾಟೀಲ್, “ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ರಾಜ್ಯದ ಸುಮಾರು 5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. 2025-26ನೇ ಸಾಲಿನಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ಮುಗಿಸಿರುವ ಮಕ್ಕಳು, ಹೊಸ ನಿಯಮದಿಂದಾಗಿ ಮತ್ತೆ ಯುಕೆಜಿಯಲ್ಲೇ ಮುಂದುವರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ 5 ವರ್ಷ 5 ತಿಂಗಳು ಪೂರೈಸಿರುವ ಮಕ್ಕಳಿಗೂ ಒಂದನೇ ತರಗತಿ ದಾಖಲಾತಿಗೆ ಅವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವಕೇಟ್ ಜನರಲ್, ನ್ಯಾಯಾಲಯ ಕಾಲಾವಕಾಶ ನೀಡಿದರೆ ವಯೋಮಿತಿ ವಿಚಾರವನ್ನು ಮರುಪರಿಶೀಲಿಸಿ ಹೊಸ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು. ಸರ್ಕಾರದ ಮನವಿ ಪುರಸ್ಕರಿಸಿದ ಹೈಕೋರ್ಟ್, ಒಂದು ವಾರದೊಳಗೆ ಸೂಕ್ತ ಪರಿಹಾರಾತ್ಮಕ ಆದೇಶ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ. ಇದರಿಂದಾಗಿ ಲಕ್ಷಾಂತರ ಪೋಷಕರಲ್ಲಿ ಈಗ ಹೊಸ ಭರವಸೆ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !