ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್: ಖಾತೆ ನಿಷೇಧಿಸುತ್ತಾ ಹೋದರೆ ನಮ್ಮ ವ್ಯವಹಾರವನ್ನೇ ಮುಚ್ಚಬೇಕಾಗುತ್ತೆ ಎಂದ ಟ್ವಿಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ್ದ ಕೆಲವು ನಿರ್ಬಂಧಿಸುವ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಐಎನ್‌ಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಟ್ವಿಟರ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದ್ದಾರೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತದರ ನಿಯೋಜಿತ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಅರ್ಜಿದಾರರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಗೌಪ್ಯ ದಾಖಲೆಯನ್ನು ಜೋಪಾನವಾಗಿ ಇಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದ ಪೀಠ, ಇಂಥದ್ದೇ ಮತ್ತೊಂದು ಮುಚ್ಚಿದ ಲಕೋಟೆಯಲ್ಲಿರುವ ದಾಖಲೆಯನ್ನು ಪ್ರತಿವಾದಿಗಳಿಗೆ ಒದಗಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ವಾದವೇನು?
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ ಹಾಗೂ ಮುಕುಲ್ ರೋಹಟ್ಗಿ, ಟ್ವಿಟರ್‌ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕಾನೂನಿನ ಅನ್ವಯ ಸರ್ಕಾರದ ಆದೇಶವನ್ನು ನಾವು ಪಾಲಿಸಬೇಕಿದೆ. ಆದರೆ, ಆಕ್ಷೇಪಾರ್ಹ ಟ್ವೀಟ್‌ಗಳನ್ನು ಬ್ಲಾಕ್ ಮಾಡುವಾಗ ಮಾತ್ರ ಯಾವುದೇ ಕಾರಣವನ್ನು ನೀಡಬೇಕಾಗಿರುವುದಿಲ್ಲ. ಹೀಗಿರುವಾಗ ಸಚಿವಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸುವುದೇ ಆದರೆ, ನಮ್ಮ ಸಂಪೂರ್ಣ ವ್ಯವಹಾರವನ್ನೇ ಮುಚ್ಚಬೇಕಾಗುತ್ತದೆ ಎಂದು ವಿವರಿಸಿದರು.

ನಿರ್ಬಂಧ ಆದೇಶ ಮತ್ತದರ ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ನಾವು ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶಿಸಿರುವ ಸರ್ಕಾರ, ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ. ಆದರೆ, ಟ್ವಿಟರ್ ಖಾತೆಯನ್ನು ನಿರ್ಬಂಧಿಸಿದರೆ ನಾವು ಬಳಕೆದಾರರಿಗೆ ಉತ್ತರಿಸಬೇಕಾಗುತ್ತದೆ ಎಂದರು.

ಅರ್ಜಿದಾರರ ವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಲಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋವಿಡ್ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ 2 ವಾರಗಳ ಬಳಿಕ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿತು.

ಪ್ರಕರಣವೇನು?
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ದ ಸೆಕ್ಷನ್ 69ಎ ಅಡಿಯಲ್ಲಿ 2021ರ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್ ನೀಡಿರುವ ಕೇಂದ್ರ ಸರ್ಕಾರ 1,474 ಟ್ವಿಟರ್ ಖಾತೆಗಳು ಹಾಗೂ 175 ಟ್ವೀಟ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶಿಸಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಕೇಂದ್ರದ ಆದೇಶದಿಂದ ಬಳಕೆದಾರರ ಹಕ್ಕುಗಳ ಉಲ್ಲಂಘನೆ ಆಗಲಿದೆ. ಯಾವ ಕಾರಣಕ್ಕಾಗಿ ಖಾತೆಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಅಗತ್ಯವೇನಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವಿವರಿಸಿಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!