ನಟ ಚೇತನ್‌ ವಿರುದ್ಧದ ಕೇಸ್‌ ವಜಾಗೊಳಿಸಲು ಹೈಕೋರ್ಟ್‌ ನಿರಾಕರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾದ ವಿಚಾರದಲ್ಲಿ ಭೂತದ ಕೋಲ ಹಿಂದು ಧರ್ಮದ ಭಾಗವಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್‌ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

ಈ ಹೇಳಿಕೆಯ ಬಳಿಕ ಚೇತನ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದ ಹಲವು ಕಡೆಗಳಲ್ಲಿ ದೂರುಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿ ಶಿವಕುಮಾರ್ ಎಂಬುವರು ಶೇಷಾದ್ರಿಪುರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಅದರಂತೆ ಐಪಿಸಿ ಸೆಕ್ಷನ್‌ 505 ಅಡಿ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್‌ನ್ನು ರದ್ದುಗೊಳಿಸಿ ಕೇಸನ್ನು ವಜಾಗೊಳಿಸುವಂತೆ ಕೋರಿ ಚೇತನ್‌ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು.

ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡದಂತೆ ಮನವಿ ಶಿವಕುಮಾರ್‌ ಅವರ ಪರವಾಗಿ ಕೋರ್ಟ್‌ನಲ್ಲಿ ವಾದ ಮಾಡಲಾಗಿತ್ತು. ನಟ ಚೇತನ್ ಅವರ ಮನವಿಯನ್ನು ಪುರಸ್ಕರಿಸಬಾರದು, ಅರ್ಜಿ ವಜಾ ಮಾಡಬೇಕು ಎಂದು ಸರ್ಕಾರಿ ವಕೀಲರ ಮನವಿ ಮಾಡಿದರು. ಇದರ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದರು.

ಚೇತನ್‌ ಟ್ವೀಟ್‌ ಮೂಲಕ ನಮ್ಮ ಕನ್ನಡ ಚಿತ್ರ ಕಾಂತಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಆದರೆ, ಭೂತ ಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ರಿಷಬ್‌ ಶೆಟ್ಟಿ ಅವರ ಮಾತು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ಇವು ವೈದಿಕ-ಬ್ರಾಹ್ಮಣೀಯ ಹಿಂದು ಧರ್ಮಕ್ಕಿಂತ ಹಿಂದಿನವು ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯವಾಗಿ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ ಎಂದು ಹೇಳಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!