May 27, 2026
Wednesday, May 27, 2026
spot_img

ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ: ಹೈಕಮಾಂಡ್ ಸಂದೇಶ ಬೆನ್ನಲ್ಲೇ ಆಪ್ತ ಸಚಿವರೊಂದಿಗೆ ಸಿಎಂ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚಟುವಟಿಕೆಗಳು ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ತಮ್ಮ ಅತ್ಯಾಪ್ತ ಸಚಿವರು ಹಾಗೂ ಶಾಸಕರೊಂದಿಗೆ ಮಹತ್ವದ ರಹಸ್ಯ ಸಭೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ನಡೆದ 6 ಗಂಟೆಗಳ ಮ್ಯಾರಾಥಾನ್ ಸಭೆಯ ವಿವರಗಳು ಹಾಗೂ ಹೈಕಮಾಂಡ್ ನೀಡಿರುವ ಮುಂದಿನ ನಿರ್ದೇಶನಗಳ ಕುರಿತು ಚರ್ಚಿಸಲು ಸಿಎಂ ಈ ತುರ್ತು ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಮ್ಯಾರಾಥಾನ್ ಸಭೆ ಮತ್ತು ಹೈಕಮಾಂಡ್ ಸಂದೇಶ
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ರೊಂದಿಗೆ ಹೈವೋಲ್ಟೇಜ್ ಸಭೆ ನಡೆದಿದೆ.

ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ರಾಷ್ಟ್ರೀಯ ರಾಜಕಾರಣಕ್ಕೆ ಬರುವಂತೆ ಹಾಗೂ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತವಾಗಿ ಕಾಂಗ್ರೆಸ್ ನಾಯಕರು ಇದನ್ನು ನಿರಾಕರಿಸಿದ್ದು, ಸಭೆಯು ಕೇವಲ ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಕುರಿತಾಗಿತ್ತು ಎಂದಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಆಪ್ತರ ಮಿಡ್‌ನೈಟ್ ಸಭೆ
ದೆಹಲಿಯಿಂದ ವಾಪಸಾದ ತಕ್ಷಣ ಸಿಎಂ ಸಿದ್ದರಾಮಯ್ಯ ಸಚಿವ ಕೆ.ಜೆ. ಜಾರ್ಜ್ ನಿವಾಸದಲ್ಲಿ ತಮ್ಮ ಆಪ್ತ ವಲಯದ ಸಚಿವರೊಂದಿಗೆ ತಡರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ. ಹೈಕಮಾಂಡ್ ನೀಡಿದ ಸಂದೇಶ ಹಾಗೂ ಮುಂದಿನ ರಾಜಕೀಯ ನಡೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಸಿದ್ದರಾಮಯ್ಯ ಪರವಾಗಿ ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಬೆಂಬಲವಿದೆ ಎಂದು ತೋರಿಸಲು ಸುಮಾರು 108 ಶಾಸಕರ ಸಹಿ ಇರುವ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

ನಾಳೆ ಡಿಕೆಶಿ ಜತೆ ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್
ನಾಯಕತ್ವ ಬದಲಾವಣೆಯ ತೀವ್ರ ಚರ್ಚೆಯ ನಡುವೆಯೇ, ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ನಾಳೆ (ಗುರುವಾರ) ಬೆಳಗ್ಗೆ 9 ಗಂಟೆಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ಈ ಸಭೆಯು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !