ಹೊಸದಿಗಂತ ವರದಿ, ಕಲಬುರಗಿ:
ರಾಜ್ಯ ಸರ್ಕಾರವು ನೀರಾವರಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ರೈತರು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ್ ಕಾರಜೋಳ್ ಅವರುಹೇಳಿದರು.
ಮಂಗಳವಾರ ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 160 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ, 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಿನಿ ವಿಧಾನಸೌದ, ಸೇಡಂ ನೂತನ ಬಸ್ ನಿಲ್ದಾಣ, 22 ಬಸ್‍ಗಳಿಗೆ ಚಾಲನೆ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿ ಸುಮಾರು 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರದಿಂದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಮಾಡಬಹುದಾಗಿದೆ. ಅದರಲ್ಲಿ 40 ಲಕ್ಷ ಹೆಕ್ಟೇರ್ ಬೃಹತ್ ನೀರಾವರಿ, 10 ಲಕ್ಷ ಸಣ್ಣ ನೀರಾವರಿ ಮತ್ತು 16 ಲಕ್ಷ ಹೆಕ್ಟೇರ್ ರೈತರ ಸ್ವಾವಲಂಬಿಯಾಗಿ ನೀರಾವರಿ ಮಾಡಬಹುದಾಗಿದೆ. ಅದರಲ್ಲಿ ಈಗಾಗಲೆ ಬೃಹತ್ ನೀರಾವರಿ 30 ಲಕ್ಷ ಹಾಗೂ ಸಣ್ಣ ನೀರಾವರಿ 3 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಮಾಡಲಾಗಿದೆ. ಕಾಗಿಣಾದಂತಹ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆದರೆ ಎಲ್ಲೆಡೆ ನೀರಾವರಿ ಆಗಲಿದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಸೇಡಂ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಪ್ರತಿ ಮನೆಗೂ ಜೆಜೆಎಂ ಯೋಜನೆಯಡಿ ನಳದ ಕನೆಕ್ಷನ್ ನೀಡಲಾಗಿದೆ. ತಾಲೂಕಿನ ಅಭಿವೃದ್ಧಿಗಾಗಿ ತರನಳ್ಳಿ, ಯಡಳ್ಳಿ ಏತ ನೀರಾವರಿ ಯೋಜನೆ ಇಂದು ಜಾರಿ ಮಾಡಲಾಗುತ್ತಿದೆ ಎಂದರು.