Sunday, December 10, 2023

Latest Posts

ರಣ ಬಿಸಿಲಿಗೆ ಹೈರಾಣಾದ ಗುಮ್ಮಟ ನಗರಿ- ಜನ ಕಂಗಾಲು

ಪರಶುರಾಮ ಶಿವಶರಣ

ವಿಜಯಪುರ: ಭೀಕರ ಬರದ ಮಧ್ಯೆ ಪ್ರಖರ ಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಮಂದಿ ಹೈರಾಣಾಗುವಂತಾಗಿದೆ.
ಹೆಸರಿಗೆ ಮಳೆಗಾಲವಾಗಿದ್ದರೂ ಪ್ರಸಕ್ತ ವರ್ಷ ಈ ಭಾಗದಲ್ಲಿ ಭೀಕರ ಬರ ಆವರಿಸಿದ್ದು, ಬೇಸಿಗೆಯ ಬಿಸಿಲಿನಂತೆ ಸೂರ್ಯ ತನ್ನ ಪ್ರಖರ ಕಿರಣಗಳಿಂದ ನೆತ್ತಿಯ ಮೇಲೆ ಕತ್ತಿಯಿಂದ ಚುಚ್ಚಿ, ನಲುಗುವಂತೆ ಮಾಡಿದ್ದು, ನೆತ್ತಿ ಸುಡುವ ಬಿಸಿಲಿನ ಹೊಡೆತಕ್ಕೆ ಸಿಲುಕಿದ ಜನರು ಇದೇನೂ ಮಳೆಗಾಲವೋ ಇಲ್ಲ ಬೇಸಿಗೆಯೋ ಎನ್ನುವು ದಿಗಿಲಿನಲ್ಲಿ ನೆರಳಿನ ಆಸರೆಗೆ ಮೊರೆಯಿಡುತ್ತಿದ್ದಾರೆ.

34.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ:

ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿದ್ದಕ್ಕೆ ರೈತ ವಲಯ ಅಷ್ಟೇ ಅಲ್ಲ, ಇತರೆ ಹಲವು ವಲಯಗಳ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದ್ದರೆ, ವಾತಾವರಣರದಲ್ಲಿನ ತೇವಾಂಶ ಕುಸಿದು, ಉಷ್ಣಾಂಶ ಹೆಚ್ಚಳಗೊಳ್ಳುತ್ತಿದೆ.

ಅ.19ರಂದು 34.0 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲಾದರೆ, ಬುಧವಾರ 33.8 ಹಾಗೂ ಮಂಗಳವಾರ 34.5ರಷ್ಟು ಉಷ್ಣಾಂಶ ದಾಖಲಾಗಿದೆ. ಬೆಳಗ್ಗೆ 8.30 ಗಂಟೆಗೆ 27-28 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲಾಗುತ್ತಿದ್ದು, ಸಂಜೆ 5 ಗಂಟೆವರೆಗೂ ಮೈಸುಡುವ ಬಿಸಿಲಿಗೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾಮಾನ್ಯವಾಗಿ ಬೇಸಿಗೆ ಕಾಲದ ವೇಳೆ ದಾಖಲಾಗುವ ಉಷ್ಣಾಂಶವಾಗಿದ್ದು, ಜಿಲ್ಲೆಗೆ ಮಳೆಗಾಲದಲ್ಲಿಯೇ ಬಿರು ಬೇಸಿಗೆ ಆವರಿಸಿದಂತೆ ಭಾಸವಾಗುತ್ತಿದೆ.

ರಣ ಬಿಸಿಲಿಗೆ ಜನ ಕಂಗಾಲು:

ನಗರ ಸೇರಿದಂತೆ ಜಿಲ್ಲೆಯ ಹಳ್ಳಿಗಳಲ್ಲಿ ರಣ ಬಿಸಲಿಗೆ ಜನರು ಕಂಗಾಲಾಗುವಂತಾಗಿದೆ. ಬೆಳಗ್ಗೆಯಿಂದ ಬಲಿತುಕೊಳ್ಳುವ ಬಿಸಿಲು ಮಧ್ಯಾಹ್ನದ ವೇಳೆ ಪ್ರಖರಗೊಂಡು ಸಾರ್ವಜನಿಕರನ್ನು ತಲ್ಲಣಗೊಳ್ಳುವಂತೆ ಮಾಡುತ್ತಿದೆ. ನಗರದ ರಸ್ತೆಗಳಲ್ಲಿ ಸಂಚರಿಸಿದರೆ ಸಾಕು ಬಿಸಿಲಿನ ಹೊಡೆತ ಅನುಭವಕ್ಕೆ ಬರುತ್ತದೆ. ಹೀಗಾಗಿ ಬಿಸಿಲಿನಿಂದ ಜನರು ಸುಸ್ತಾಗಿ ಉದ್ಯಾನದಲ್ಲೋ, ಗಿಡ, ಮರಗಳ ಆಸರೆಯಲ್ಲೋ ವಿಶ್ರಾಂತಿಗೆ ಮುಂದಾಗುವಂತಾಗಿದೆ.

ಇನ್ನು ಜಿಲ್ಲೆಯ ಗ್ರಾಮೀಣ ಭಾಗದ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಪ್ರತಿ ಹಳ್ಳಿಗಳೂ ಮಧ್ಯಾಹ್ನದ ರಣ  ಬಿಸಿಲಿಗೆ ಬೇಸತ್ತು, ಗುಡಿ, ಗುಂಡಾರದಲ್ಲಿಯೋ, ಗಿಡ, ಮರದ ಕೆಳಗಡೆಯೋ ಅರೆನಗ್ನರಾಗಿ ಬೋರಲಾಗಿ ಮಲಗಿಕೊಳ್ಳುವಂತಾಗಿದೆ. ಕೃಷಿ ಚಟುವಟಿಕೆಗಳಿಲ್ಲದೆ ಮೊದಲೇ ಕಂಗಾಲಾದ ಗ್ರಾಮೀಣ ಜನರು, ಈ ಬಿಸಿಲಿನ ತಾಪಕ್ಕೆ ಮತ್ತಷ್ಟು ಬಳಲುವಂತಾಗಿದೆ.

ಇನ್ನು ಮಳೆ ಇಲ್ಲದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳಗೊಂಡು ಅಂತರ್ಜಲ ಮಟ್ಟ ಕೂಡ ಕುಸಿಯುವಂತಾಗಿದ್ದರೆ, ಬಿಸಿಲಿನ ಹೊಡೆತಕ್ಕೆ ಅಲ್ಪಸ್ವಲ್ಪ ಬಂದಿರುವ ಬೆಳೆಗಳು ಕೂಡ ಕಮರುವಂತಾಗಿದೆ. ಇನ್ನು ಮಳೆಗಾಲದ ಸಂದರ್ಭದಲ್ಲಿಯೇ ಹೀಗಾದರೆ ಮುಂಬರುವ ಬೇಸಿಗೆಗೆ ಇನ್ನೆಂತಹ ಬಿಸಿಲು. ಬರುವ ಬೇಸಿಗೆ ಬಲು ಘೋರವಾಗಬಹುದು ಎಂದೇ ನೆನೆಸಿಕೊಂಡು ಜನರು ಹೌಹಾರುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!