ನಾಳೆ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯ: ಗೆಲುವಿನ ಹುಮ್ಮಸ್ಸಿನಲ್ಲಿ ಉಭಯ ತಂಡಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯದಲ್ಲಿ ನಾಳೆ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಹಣಾಹಣಿ ನಡೆಯಲಿದೆ.

ದುಬೈನಲ್ಲಿ ಈ ಪಂದ್ಯ ನಡೆಯಲಿದ್ದು, ಕಳೆದ ಹಲವು ದಿನಗಳಿಂದ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಕಾಯುತ್ತಿದೆ.

ಎರಡೂ ತಂಡಗಳಿಗೆ ಇದು ಈ ಟೂರ್ನಿಯ ಎರಡನೇ ಪಂದ್ಯವಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸಿರುವ ಭಾರತ ತಂಡ ಈ ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಪಡೆದುಕೊಂಡಿತು. ಆದರೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೊತ್ತಿತ್ತು. ಹೀಗಾಗಿ ನಾಳಿನ ಪಂದ್ಯ ಪಾಕ್ ಪಾಲಿಗೆ ನಿರ್ಣಾಯಕವಾಗಿದೆ.

ಹವಾಮಾನ ಮುನ್ಸೂಚನೆ
ಫೆಬ್ರವರಿ 23 ರಂದು ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪ್ರೇಕ್ಷಕರು ಇಡೀ ಪಂದ್ಯವನ್ನು ಆನಂದಿಸಬಹುದು. ಮಧ್ಯಾಹ್ನದ ವೇಳೆಗೆ ಬಯಲು ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಬಹುದು. ಭಾನುವಾರ ದುಬೈನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ದುಬೈ ಪಿಚ್ ನಿಧಾನಗತಿಯ ಪಿಚ್ ಆಗಿರುವ ಕಾರಣ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಈ ಪಿಚ್‌ನಲ್ಲಿ ಹೊಸ ಚೆಂಡು ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಪಂದ್ಯ ಮುಂದುವರೆದಂತೆ, ಸ್ಪಿನ್ನರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಹೀಗಾಗಿ ಪಂದ್ಯದ ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಪಿಚ್‌ನ ಸಂಪೂರ್ಣ ಲಾಭ ಪಡೆಯಬಹುದು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಶಮಿ 5 ವಿಕೆಟ್ ಮತ್ತು ರಾಣಾ 3 ವಿಕೆಟ್ ಕಬಳಿಸಿದ್ದರು. ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿದರೆ ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರಾವ್ಸ್ ಅದರ ಸಂಪೂರ್ಣ ಲಾಭ ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳ ನಡುವೆ ಟಾಸ್ ಮುಖ್ಯವಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಹಾಗಾಗಿ ಟಾಸ್ 2 ಗಂಟೆಗೆ ನಡೆಯಲಿದೆ.ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ 18 ನೆಟ್‌ವರ್ಕ್‌ಗಳ ಚಾನೆಲ್‌ಗಳಲ್ಲಿ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ.ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಮೊಬೈಲ್‌ನಲ್ಲಿ ಲಭ್ಯವಿರುತ್ತದೆ.

ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ ಮತ್ತು ವರುಣ್ ಚಕ್ರವರ್ತಿ.

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಬಾಬರ್ ಆಝಂ, ಕಮ್ರಾನ್ ಗುಲಾಮ್, ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾನ್ ಮತ್ತು ಸೌದ್ ಶಕೀಲ್.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!