ಇನ್ಫೋಸಿಸ್ ಜೊತೆ ಉನ್ನತ ಶಿಕ್ಷಣ ಇಲಾಖೆ ಒಡಂಬಡಿಕೆ: ಉಚಿತವಾಗಿ 12,300 ಕೋರ್ಸುಗಳು ಲಭ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ ಸರ್ಕಾರದ ಎಲ್ಲ ವಿ.ವಿ.ಗಳು, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಜೊತೆ ಮಂಗಳವಾರ ಒಡಂಬಡಿಕೆಗೆ ಅಂಕಿತ ಹಾಕಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ಇನ್ಫೋಸಿಸ್‌ನ ತಿರುಮಲ ಆರೋಹಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು.
ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಕರ್ನಾಟಕ, ತುಮಕೂರು, ಗುಲ್ಬರ್ಗ, ಕುವೆಂಪು, ಸಂಗೀತ, ಜಾನಪದ ಸೇರಿದಂತೆ ಎಲ್ಲಾ 24 ವಿ.ವಿ.ಗಳ ಕುಲಪತಿಗಳು ಹಾಜರಿದ್ದು, ಒಡಂಬಡಿಕೆ ಹಸ್ತಾಂತರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, `ಇನ್ಫೋಸಿಸ್ ಸಂಸ್ಥೆಯು ಸಮಾಜದ ಒಳಿತಿಗಾಗಿ ತನ್ನ ಜ್ಞಾನ ಪರಿಣತಿಯನ್ನು ಹಂಚಿಕೊಳ್ಳಲು ಮುಂದೆ ಬಂದಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ (https://infyspringboard.onwingspan.com) ವ್ಯವಸ್ಥೆಯಡಿ 12,300 ಕೋರ್ಸುಗಳು ಉಚಿತವಾಗಿ ಲಭ್ಯವಿವೆ. 6ನೇ ತರಗತಿಯಿಂದ ಪಿಎಚ್ ಡಿ ವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಕೋರ್ಸ್‌ ಗಳನ್ನು ಆನ್ ಲೈನ್ ನಲ್ಲಿ ಕಲಿಯಬಹುದು. ಜತೆಗೆ, ಅದು 800ಕ್ಕೂ ಹೆಚ್ಚು ಶಿಕ್ಷಣ ಪರಿಣತರ ನೆರವನ್ನು ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ನೀಡಲಿದೆ ಎಂದರು.

ಇದರಿಂದ ನಮ್ಮ ವಿ.ವಿ.ಗಳು ಸ್ಪ್ರಿಂಗ್‌ಬೋರ್ಡ್ ವೇದಿಕೆಯಲ್ಲಿರುವ ಕೋರ್ಸುಗಳನ್ನು ಪರಿಣಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಮೂಲಕ ವಿ.ವಿ.ಗಳು ತಮ್ಮ ಪಠ್ಯಕ್ರಮಗಳನ್ನು ಪ್ರಸ್ತುತಗೊಳಿಸಿಕೊಳ್ಳಬೇಕು. ಬಳಿಕ, ಇವುಗಳ ಮೂಲಕ ಬೋಧಕರಿಗೆ ಹಲವು ಉಪಯುಕ್ತ ಬೋಧನಾ ತಂತ್ರಗಳನ್ನು ಕಲಿಸಬೇಕು. ಜತೆಗೆ ಇಲ್ಲಿರುವ ಪರಿಣತರನ್ನು ಕಾಲೇಜುಗಳು ಮತ್ತು ವಿ.ವಿ.ಗಳು ತಮ್ಮ ಅಧ್ಯಯನ ಮಂಡಲಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ಇನ್ಫೋಸಿಸ್‌ ಸಂಸ್ಥೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ತಿರುಮಲ ಆರೋಹಿ ಮಾತನಾಡಿ , 2025ರ ವೇಳೆಗೆ ಒಂದು ಕೋಟಿ ಯುವಜನರಿಗೆ ಡಿಜಿಟಲ್ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವುದು ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ನ ಗುರಿಯಾಗಿದೆ. ಇದರಲ್ಲಿ 10ರಿಂದ 22 ವರ್ಷದೊಳಗಿನ ಯುವಜನರತ್ತ ಗಮನವನ್ನು ಕೇಂದ್ರೀಕರಿಸಿದ್ದೇವೆ. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಿದ್ದು, ಈಗಾಗಲೇ 23 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ಸ್ಪ್ರಿಂಗ್‌ಬೋರ್ಡ್ ವೇದಿಕೆಯಲ್ಲಿ ಕಲಿಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ರಾಜ್ಯದ ಎಲ್ಲ ವಿ.ವಿ.ಗಳ ಕುಲಪತಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!