Sunday, October 2, 2022

Latest Posts

ಹಿಜಾಬ್​ ಪರ ಸುಪ್ರೀಂಗೆ ಮೇಲ್ಮನವಿ: ಸೆಪ್ಟೆಂಬರ್​ 7ಕ್ಕೆ ವಿಚಾರಣೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಕುರಿತು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಆರಂಭಿಸಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಇಂದು ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ .

ಶಾಲಾ – ಕಾಲೇಜುಗಳ ತರಗತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಪೀಠ , ಶಾಲಾ- ಕಾಲೇಜುಗಳಲ್ಲಿ ಹಿಜಾಬ್​ ಧರಿಸಿ ಬರುವುದಾದರೆ, ಶಿಕ್ಷಣ ಸಂಸ್ಥೆಗಳು ರೂಪಿಸಿದ ಸಮವಸ್ತ್ರ ನಿಯಮದ ಅಗತ್ಯವೇನು? ವಿದ್ಯಾರ್ಥಿಗಳು ತಮ್ಮ ಇಚ್ಚಾನುಸಾರ ಯಾವ ಧಿರಿಸು ಬೇಕಾದರೂ ಹಾಕಿಕೊಂಡು ತರಗತಿಗೆ ಬರಬಹುದೇ ಎಂದು ​ ಪ್ರಶ್ನಿಸಿದೆ.

ಕಾಲೇಜು ಅಭಿವೃದ್ಧಿ ಸಮಿತಿಗಳು ರೂಪಿಸಿದ ಸಮವಸ್ತ್ರ ಹಾಕಿಕೊಳ್ಳುವುದು ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರದ ಆದೇಶವು ಶಿಕ್ಷಣದ ಹಕ್ಕನ್ನು ಉಲ್ಲಂಘಿಸಿದಂತೆ ತೋರುತ್ತಿಲ್ಲ ಎಂದೂ ಸುಪ್ರೀಂ ಹೇಳಿದೆ.

ಶಿಕ್ಷಣ ಸಂಸ್ಥೆಯೊಂದು ಸಮವಸ್ತ್ರ ನಿಯಮ ರೂಪಿಸುವ ಅಧಿಕಾರವಿಲ್ಲವಾದರೆ, ಮಕ್ಕಳು ಶಾಲೆಗೆ ಮಿಡೀಸ್​, ಸ್ಕರ್ಟ್​ ಸೇರಿದಂತೆ ಏನನ್ನೂ ಬೇಕಾದರೂ ಹಾಕಿಕೊಂಡು ಬರಬಹುದೇ ಎಂದು ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಅವರು ಪ್ರಶ್ನೆ ಕೇಳಿದರು.

ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಡ್ರೆಸ್ ಕೋಡ್ ಅನ್ನು ರೂಪಿತವಾದ ಶಿಕ್ಷಣ ಸಂಸ್ಥೆಯೊಳಗೆ ಅದನ್ನು ಆಚರಿಸಬಹುದೇ ಎಂಬುದು ಪ್ರಕರಣದ ಸಮಸ್ಯೆಯಾಗಿದೆ ಎಂದು ಪೀಠ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ರಂದು, ಮಧ್ಯಾಹ್ನ 2 ಗಂಟೆಗೆ ಮುಂದೂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!