ಹಿಜಾಬ್ ವಿವಾದ ವಿಚಾರಣೆ: ಇಂದು ಕೋರ್ಟ್ ಕಲಾಪದಲ್ಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪೂರ್ಣ ಪೀಠ ಮುಂದುವರಿಸಿದ್ದು, ಸೋಮವಾರ ಆರ್ಟಿಕಲ್ 25 ಮತ್ತು ಸರಕಾರ ಸುತ್ತೋಲೆಯ ಹಾಗೂ ಅದರಲ್ಲಿ ಉಲ್ಲೇಖಿಸಿರುವ ಹಲವು ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಲಾಯಿತು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಕುಂದಾಪುರ ಕಾಲೇಜು ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿ ಪರ ಹಿರಿಯ ವಕೀಲ ದೇವದತ್ತ್ ಕಾಮತ್ ತಮ್ಮ ವಾದ ಮಂಡಿಸಿದ್ದು, ಫೆ. 5ರ ಸರಕಾರಿ ಆದೇಶದ ವಿರುದ್ಧ ಸಲ್ಲಿಕೆಗಳನ್ನು ಪ್ರಾರಂಭಿಸಿದರು.

ಮುಖ್ಯವಾಗಿ ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ಹಿಜಾಬ್ ಧರಿಸುವುದನ್ನು ಆರ್ಟಿಕಲ್ 25ರ ಮೂಲಕ ರಕ್ಷಿಸಲಾಗಿಲ್ಲ, ಸರಕಾರದ ಘೋಷಣೆ ಸಂಪೂರ್ಣವಾಗಿ ತಪ್ಪಾಗಿದೆ. ಹಿಜಾಬ್ ಅನ್ನು ಅನುಮತಿಸಬಹುದೇ ಎಂದು ನಿರ್ಧರಿಸಲು ಕಾಲೇಜು ಅಭಿವೃದ್ಧಿ ಸಮಿತಿಗೆ ಬಿಡುತ್ತೇವೆ ಎಂದಿರುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ವಾದಿಸಿದರು.

ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಆರ್ಟಿಕಲ್ 25ರ ಅಡಿಯಲ್ಲಿ ನೀಡಲಾದ ಈ ಹಕ್ಕು ಸಂಪೂರ್ಣ ಹಕ್ಕಾಗಿದೆಯೇ ಅಥವಾ ಕೆಲವು ನಿರ್ಬಂಧಗಳಿಗೆ ಸಂಬಂಧಿತ ವ್ಯಕ್ತಿನಿಷ್ಠವೇ? ಎಂದು ಮರು ಪಶ್ನಿಸಿದರು. ಹಿರಿಯ ವಕೀಲ ಕಾಮತ್, ಆರ್ಟಿಕಲ್ 25ರ ಹಕ್ಕುಗಳು ಆರ್ಟಿಕಲ್ 19ರ ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿಲ್ಲ ಎಂದರು.

ಮತ್ತೆ ಸಿಜೆ 25ನೇ ವಿಧಿಯು ಇದಕ್ಕೆ ಒಳಪಟ್ಟಿದೆ ಎಂಬ ಪದಗಳೊಂದಿಗೆ ಪ್ರಾರಂಭವಾಗುತ್ತದೆ, ಅದರ ಅರ್ಥವೇನು? ಎಂದು ಪ್ರಶ್ನಿಸಿದರು. ಈ ಸರಕಾರಿ ಆದೇಶದಲ್ಲಿ ಯಾವ ರೀತಿಯಲ್ಲಿ 25 ನೇ ವಿಧಿಯನ್ನು ನಿರ್ಬಂಧಿಸಲಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.

ಸರಕಾರಿ ಆದೇಶದಲ್ಲಿ ತಲೆಯ ಸ್ಕಾರ್ಫ್ ಅನ್ನು ನಿಷೇಧಿಸುವುದು ಆರ್ಟಿಕಲ್ 25ರ ಉಲ್ಲಂಘನೆಯಲ್ಲ ಎಂದು ಅವರು ಹೇಳುತ್ತಾರೆ ಮತ್ತು ವಿಷಯವನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ವಹಿಸಿದ್ದಾರೆಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದೇ ವೇಳೆ ಕೇರಳ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ಗಳ ತೀರ್ಪಿನಿಂದ ಹಲವು ವಿಚಾರಗಳನ್ನು ಉಲ್ಲೇಖಿಸಿ, ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿದರು. ಜೊತೆಗೆ ವಕೀಲ ಕಾಮತ್, ಧರ್ಮದ ಹಿನ್ನೆಲೆಯಲ್ಲಿ ಮಲೇಷ್ಯಾದ ತೀರ್ಪು, ಶೀರೂರು ಮಠದ ತೀರ್ಪನ್ನು ಕೂಡ ಉಲ್ಲೇಖಿಸಿದರು.

ಕಾಲೇಜು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಪ್ರವೇಶ ಪಡೆದ ದಿನದಿಂದ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸಿದ್ದರು. ಅವರು ಕಳೆದ ಎರಡು ವರ್ಷಗಳಿಂದ ಧರಿಸುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯಗಳು ಸಹ ಅದೇ ಏಕರೂಪದ ಬಣ್ಣದ ಹಿಜಾಬ್ ಅನ್ನು ಅನುಮತಿಸುತ್ತವೆ. ಇದು ವಿದ್ಯಾರ್ಥಿನಿಯರು ಬೇರೆ ಸಮವಸ್ತ್ರಕ್ಕಾಗಿ ಒತ್ತಾಯಿಸುತ್ತಿರುವ ಪ್ರಕರಣವಲ್ಲ. ಸೂಚಿಸಿರುವ ಸಮವಸ್ತ್ರದ ಬಣ್ಣದ ಹಿಜಾಬ್ ಅನ್ನೇ ತಲೆಗೆ ಮುಚ್ಚಿಕೊಳ್ಳುವುದಾಗಿ ಮಾತ್ರ ಹೇಳುತ್ತಿದ್ದಾರೆ ಎಂದು ಹಿರಿಯ ವಕೀಲ ಕಾಮತ್ ಮನವಿ ಮಾಡಿದರು.

ಹಿಜಾಬ್ ಧರಿಸಲು ಅನುಮತಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಕಾಲೇಜು ಅಭಿವೃದ್ಧಿ ಸಮಿತಿಗೆ ಅನುಮತಿ ನೀಡಿದ್ದು, ಸರಕಾರ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಸರಕಾರಿ ಆದೇಶದ ಕರಡು ರಚಿಸಿದ ವ್ಯಕ್ತಿ ಆರ್ಟಿಕಲ್ 25 ಅನ್ನು ನೋಡಿಲ್ಲ. ಶಾಸಕರ ಅಧ್ಯಕ್ಷತೆಯ ಕಾಲೇಜು ಅಭಿವೃದ್ಧಿ ಸಮಿತಿಯು ಕಾನೂನು ಬಾಹಿರ ಸಮಿತಿಯಾಗಿದೆ ಎಂದು ಹಿರಿಯ ವಕೀಲ ಕಾಮತ್ ವಾದಿಸಿದರು. ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್, ನೀವು ಶಾಸಕರನ್ನು ಹೊರಗಿಡಲು ಬಯಸುವಿರಾ? ದಯವಿಟ್ಟು ಓದಿ, ಊಹೆಗಳನ್ನು ಮಾಡಬೇಡಿ. ಸಮಿತಿಯಲ್ಲಿ ಬೇರೆ ಸದಸ್ಯರನ್ನೂ ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಶಾಸಕರಿಗೆ ವಿಟೋ ಅಧಿಕಾರವಿಲ್ಲ ಎಂದು ಹೇಳಿದರು. ಅಲ್ಲದೇ ಒಬ್ಬ ಶಾಸಕರು ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಎಂದು ಹೇಳುವ ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪನ್ನು ನೀವು ಉಲ್ಲೇಖಿಸಬಹುದೇ? ಎಂದು ಪ್ರಶ್ನಿಸಿದರು. ಇದಕ್ಕೆ ಕಾಮತ್ ಇಲ್ಲವೆಂದು ಉತ್ತರಿಸಿದರು.

ಸರಕಾರಿ ಅನುವಾದಕರಿಗೆ ಕನ್ನಡ ತಿಳಿದಿದೆಯೇ?
ಹಿಜಾಬ್ ಸಂಬಂಧಿಸಿ ಸರಕಾರದ ಸುತ್ತೋಲೆ ಸಿದ್ಧಪಡಿಸಿದವರಿಗೆ ಕನ್ನಡ ಬರುವುದಿಲ್ಲವೇ? ಎಂದು ನ್ಯಾಯಮೂರ್ತಿ ದೀಕ್ಷಿತ್ ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಸುತ್ತೋಲೆಯಲ್ಲಿರುವ ‘ವಿದ್ಯಾರ್ಥಿಗಳು ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಮವಸ್ತ್ರವನ್ನು ಧರಿಸಬೇಕು’ ಎಂಬ ವಾಕ್ಯ ಓದಿದರು. ಈ ಸಂದರ್ಭದಲ್ಲಿ ಅನುವಾದವು ನಿಖರವಾಗಿಲ್ಲ ಎಂದು ಸರಕಾರದ ಪರ ಅಡ್ವೊಕೇಟ್ ಜನರಲ್ ಹೇಳಿದ್ದು, ಸಿಜೆ ಕೂಡ ಅದನ್ನೇ ಹೇಳಿದರು. ಈ ವೇಳೆ ಅಡ್ವೊಕೇಟ್ ಜನರಲ್‌ಗೆ ನ್ಯಾಯಮೂರ್ತಿ ದೀಕ್ಷಿತ್ ಅವರು, ನಿಮ್ಮ ಅಧಿಕೃತ ಅನುವಾದಕರಿಗೆ ಕನ್ನಡ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದು, ನ್ಯಾಯಾಲಯದ ಹಾಲ್‌ನಲ್ಲಿರುವವರೆಲ್ಲ ನಕ್ಕ ಪ್ರಸಂಗವೂ ನಡೆಯಿತು. ನಂತರ ನ್ಯಾಯಮೂರ್ತಿ ದೀಕ್ಷಿತ್ ಅವರು ಸರಕಾರದ ಆದೇಶದಲ್ಲಿನ ಪದವನ್ನು ಓಡಿ, ‘ಇದು ಸಾರ್ವಜನಿಕ ಸುವ್ಯವಸ್ಥೆ ಎಂದರ್ಥವಲ್ಲ. ಸರಕಾರಿ ಆದೇಶವನ್ನು ಶಾಸನದಂತೆ ಅರ್ಥೈಸಲು ಸಾಧ್ಯವಿಲ್ಲ. ನಾವು ಸಾಮಾನ್ಯ ಜ್ಞಾನವನ್ನು ಬಳಸಬೇಕು. ಪದಗಳಿಗೆ ಸ್ಥಿರ ಅರ್ಥವಿಲ್ಲ’ ಎಂದು ಹೇಳಿದರು.

ಮುಖ್ಯ ನ್ಯಾಯಾಧೀಶರು ಅರ್ಜಿದಾರರಿಂದ ಬೇರೆ ಯಾರು ವಾದಿಸುತ್ತಾರೆ? ಎಂದು ಪ್ರಶ್ನಿಸಿದರು. ಹಿರಿಯ ವಕೀಲ ಕಾಮತ್ ಅವರು ತನಗೆ ವಾದ ಪೂರ್ಣಗೊಳಿಸಲು 15-20 ನಿಮಿಷಗಳು ಬೇಕು ಎಂದರು. ವಕೀಲ ಕಾಳೀಶ್ವರಂ ರಾಜ್ ತನಗೆ 10 ನಿಮಷಗಳು ಬೇಕೆಂದು ಹಾಗೂ ಒಬ್ಬ ಅರ್ಜಿದಾರರಿಗೆ ಕೆಲವು ಸಲ್ಲಿಕೆಗಳನ್ನು ನೀಡಲು ಬಯಸುವುದಾಗಿ ಹಿರಿಯ ವಕೀಲ ಯೂಸುಫ್ ಎಂ. ಹೇಳಿದರು. ಮುಖ್ಯ ನ್ಯಾಯಧೀಶರು ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದರು.

ಹಿಜಾಬ್ ವಿಚಾರಣೆಗೂ ಚುನಾವಣೆಗೂ ಸಂಬಂಧವಿಲ್ಲ:
ಅರ್ಜಿ ಪರ ವಕೀಲರೊಬ್ಬರು ಇತರ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ಈ ವಿಷಯದ ಕುರಿತು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಸಾರವನ್ನು ನಿರ್ಬಂಧಿಸುವ ಪ್ರಸ್ತಾಪಿಸಿದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ನಮಗೆ ಚುನಾವಣೆಗೆ ಸಂಬಂಧವಿಲ್ಲ. ಈ ವಿನಂತಿಯು ಚುನಾವಣಾ ಆಯೋಗದಿಂದ ಬಂದರೆ, ನಾವು ಪರಿಗಣಿಸಬಹುದು. ನಾವು ಮಾಧ್ಯಮಗಳಿಗೆ ಮನವಿ ಮಾಡಿದ್ದೇವೆ. ನೀವೆಲ್ಲರೂ ಹೇಳಿದರೆ ನಾವು ನೇರ ಪ್ರಸಾರವನ್ನು ನಿಲ್ಲಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಮಾಧ್ಯಮವನ್ನು ತಡೆಯಲು ಸಾಧ್ಯವಿಲ್ಲ. ಚುನಾವಣೆಯ ಮಟ್ಟಿಗೆ ನೀವು ಆ ರಾಜ್ಯಗಳ ಮತದಾರರಲ್ಲ ಎಂದರು. ಚುನಾವಣಾ ವಿಚಾರಗಳನ್ನು ಭಾರತೀಯ ಚುನಾವಣಾ ಆಯೋಗ ನಿರ್ಧರಿಸುತ್ತದೆ ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!