ಉತ್ತರ ಪ್ರದೇಶ: ಉದಾರವಾದಿ ಅಲ್ಪಸಂಖ್ಯಾತ ಮತಗಳು ಈ ಬಾರಿಯೂ ಬಿಜೆಪಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಮತಗಳು ಸಮಾಜವಾದಿ ಪಕ್ಷಕ್ಕೆ ಹೋಗಲಿವೆ ಎಂಬ ಪ್ರಚಾರ ಜೋರಾಗಿ ನಡೆದಿದ್ದರೂ, ಗಣನೀಯ ಪ್ರಮಾಣದ ಮುಸ್ಲಿಂ ಮತಗಳು ಈ ಬಾರಿಯೂ ಬಿಜೆಪಿಗೆ ಲಭಿಸಲಿವೆಯೇ ? ಇಂತಹ ಒಂದು ಚರ್ಚೆ ರಾಜಕೀಯ ವಿಶ್ಲೇಷಕರ ನಡುವೆ ನಡೆಯುತ್ತಿದೆ.
ಮುಸ್ಲಿಮರೆಂದರೆ ಸಾರಾಸಗಟಾಗಿ ಬಿಜೆಪಿ ವಿರುದ್ಧ ಮತ ನೀಡುತ್ತಾರೆ ಎಂಬುದಾಗಿ ಮಾಧ್ಯಮ ವರ್ಗ, ರಾಜಕೀಯ ಪಕ್ಷಗಳು ಬಿಂಬಿಸುತ್ತಲೇ ಬಂದಿರುವ ಹೊರತಾಗಿಯೂ ಕಳೆದ ಬಾರಿ ಗಣನೀಯ ಪ್ರಮಾಣದ ಮುಸ್ಲಿಮ್ ಮತಗಳು ಬಿಜೆಪಿಗೆ ಲಭಿಸಿದ್ದವು. ವಿಶೇಷವಾಗಿ ಮುಸ್ಲಿಮ್ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದರು ಎಂಬುದು ಚುನಾವಣೋತ್ತರದಲ್ಲಿ ವ್ಯಕ್ತವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಸರಕಾರ ತ್ರಿವಳಿ ತಲಾಖ್ ರದ್ದುಗೊಳಿಸಿದ ಬಳಿಕ ಮುಸ್ಲಿಮ್ ಸಮುದಾಯದ ಚಿಂತನೆಯಲ್ಲಿ ಬದಲಾವಣೆ ಉಂಟಾಗಿತ್ತು.ಅನೇಕ ಮುಸ್ಲಿಮ್ ಪ್ರಜ್ಞಾವಂತರು ಮತ್ತು ಮಹಿಳೆಯರು ತ್ರಿವಳಿ ತಲಾಖ್ ರದ್ದುಗೊಳಿಸಿದ ಕ್ರಮವನ್ನು ಸ್ವಾಗತಿಸಿದ್ದರು.ಅನಂತರ ನಡೆದ ಚುನಾವಣೆಗಳಲ್ಲೂ ಇದು ಪ್ರತಿಫಲಿತವಾಗಿತ್ತು.ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂದು ವಿರೋಧಿಗಳು ಸತತವಾಗಿ ಪ್ರಚಾರ ನಡೆಸುತ್ತಾ ಬಂದರೂ ಇಂತಹ ಒಂದು ಬದಲಾವಣೆ ಕಂಡುಬಂದುದು ಚುನಾವಣಾ ವಿಶ್ಲೇಷಕರನ್ನೂ ಅಚ್ಚರಿಗೊಳಿಸಿತ್ತು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಕೋಮುಗಲಭೆ, ಮಾಫಿಯಾಗಳ ಅಟ್ಟಹಾಸಗಳನ್ನು ಮಟ್ಟಹಾಕಲಾಗಿದ್ದು, ಕ್ರಿಮಿನಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಶಾಂತಿ, ನೆಮ್ಮದಿಯ ಬದುಕು ಬಯಸುವ ರಾಜ್ಯದ ಜನತೆಯಲ್ಲಿ ಸಂತಸ ತಂದಿದೆ.ಕೇಂದ್ರದ ನರೇಂದ್ರ ಮೋದಿ ಸರಕಾರ ಅಥವಾ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಎಲ್ಲೂ ಜಾತಿ, ಮತದ ನೆಲೆಯಲ್ಲಿ ತಾರತಮ್ಯ ಮಾಡದೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಿರುವುದು ಅಲ್ಪಸಂಖ್ಯಾತ ವರ್ಗದ ಪ್ರಜ್ಞಾವಂತರನ್ನೂ ಸೆಳೆದಿದೆ.
ಮುಸ್ಲಿಮ್ ಮಹಿಳೆಯರ ಬೆಂಬಲ
ಇತ್ತೀಚೆಗೆ ಪ್ರಧಾನಿ ಮೋದಿಯವರು ರಾಜ್ಯದ ಮುಸ್ಲಿಂ ಬಾಹುಳ್ಯ ಜಿಲ್ಲೆಗಳಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲೂ, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬುದೇ ತಮ್ಮ ಸರಕಾರದ ಮೂಲಮಂತ್ರವಾಗಿರುವುದನ್ನು ಒತ್ತಿ ಹೇಳಿದ್ದು, ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ದೇಶದ ಉನ್ನತಿಯಲ್ಲಿ ಹೇಗೆ ಸಹಭಾಗಿಗಳನ್ನಾಗಿಸಲಾಗಿದೆ ಎಂದು ವಿವರಿಸಿದ್ದರು. ತ್ರಿವಳಿ ತಲಾಖ್ ರದ್ದತಿಯಿಂದ ಮುಸ್ಲಿಮ್ ಮಹಿಳೆಯರ ಬದುಕಿಗೆ ಹೇಗೆ ನ್ಯಾಯ, ಸುರಕ್ಷತೆ ,ಗೌರವ ಲಭಿಸಿದೆ ಎಂಬ ಬಗ್ಗೆ ಗಮನ ಸೆಳೆದಿದ್ದರು.
ಈಗಾಗಲೇ ಅನೇಕ ಮುಸ್ಲಿಮ್ ಮಹಿಳೆಯರು ಬಿಜೆಪಿಗೆ ಬಹಿರಂಗ ಬೆಂಬಲ ನೀಡಿರುವ ಬಗ್ಗೆ ವಿಡಿಯೋ ಕ್ಲಿಪ್ಲಿಂಗ್‌ಗಳೂ ಬಿಡುಗಡೆಗೊಂಡಿದ್ದು, ಇದರಲ್ಲಿ ರಾಜ್ಯ ಬಿಜೆಪಿ ಸರಕಾರವನ್ನು ಶ್ಲಾಘಿಸಲಾಗಿದೆ.ಮೋದಿಯವರು ತ್ರಿವಳಿ ತಲಾಖ್ ರದ್ದುಗೊಳಿಸುವ ಮೂಲಕ ತಮ್ಮ ಹೆಣ್ಣುಮಕ್ಕಳ ಭವಿಷ್ಯ ಬಗ್ಗೆ ಚಿಂತೆ ಹೊಂದಿದ್ದ ಹಿರಿಯ ಮುಸ್ಲಿಮ್ ಮಹಿಳೆಯರ ಬಾಳ ಇಳಿಸಂಜೆಯಲ್ಲಿ ಹೇಗೆ ನಿರಾಳತೆ ತಂದಿದೆ ಮತ್ತು ಯೋಗಿ ಸರಕಾರ ಮುಸ್ಲಿಮ್ ಮಹಿಳೆಯರ ಶೋಷಣೆಯನ್ನು ಹೇಗೆ ನಿಯಂತ್ರಿಸಿದೆ ಎಂಬುದನ್ನು ಮೋದಿ ತಿಳಿಸಿದಾಗ, ಮೋದಿ ಮೋದಿ ಎಂಬ ಘೋಷಣೆಗಳು ಸಭೆಯಿಂದ ಮೊಳಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!