ಹಿಜಾಬ್ ವಿವಾದ: ಮಧ್ಯಂತರ ಅರ್ಜಿ ಮತ್ತು ಅಫಿಡವಿಟ್ ತಿರಸ್ಕರಿಸಿದ ಹೈಕೋರ್ಟ್, ವಿಚಾರಣೆ ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಂದಿರುವ ಹಿಜಾಬ್ ವಿವಾದ ಪ್ರಕರಣದ ಮ್ಯಾರಥಾನ್ ವಿಚಾರಣೆ ನಡೆಯುತ್ತಿದೆ. ಪ್ರತಿದಿನ 2-2.30 ತಾಸುಗಳ ಕಾಲ ಈ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು, ಅರ್ಜಿದಾರರ ಪರ ವಕೀಲರು ಸಲ್ಲಿಸಿದ ಮಧ್ಯಂತರ ಅರ್ಜಿ ಹಾಗೂ ಅಫಿಡವಿಟ್ ತಿರಸ್ಕರಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಮಂಗಳವಾರ ನಡೆದ ವಿಚಾರಣೆಯಲ್ಲಿ ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿ ಪರ ವಕೀಲ ಹಿರಿಯ ವಕೀಲ ದೇವದತ್ ಕಾಮತ್ ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಿದರು. ನಂತರ ವಕೀಲ ಕಾಳೀಶ್ವರಂ ರಾಜ್ ಅವರು ಮಧ್ಯಂತರ ಸಲ್ಲಿಕೆಗಳನ್ನು ಪ್ರಾರಂಭಿಸಿದರು. ಈ ವೇಳೆ ಅರ್ಜಿದಾರರ ಪರ ಬೇರೆ ಬೇರೆ ವಕೀಲರು ಮಧ್ಯಪ್ರವೇಶಿಸಿ, ಗೊಂದಲ ಉಂಟಾದ್ದರಿಂದ ಎಲ್ಲರೂ ತಡೆ ಹಿಡಿಯುವಂತೆ ನ್ಯಾಯ ಪೀಠ ಹೇಳಿ, ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರಿಗೆ ಸಲ್ಲಿಕೆಗಳನ್ನು ಪ್ರಾರಂಭಿಸಲು ಅನುಮತಿಸಿತು.

ವಿಚಾರಣೆ ವೇಳೆ ಅರ್ಜಿದಾರರಲ್ಲಿರೊಬ್ಬರಾದ ರೇಶಮ್ ಎರಡು ಅರ್ಜಿಗಳನ್ನು ಸಲ್ಲಿಸಿರುವುದು ಕಂಡು ಬಂದು, ಮುಖ್ಯ ನ್ಯಾಯಮೂರ್ತಿಗಳು ಒಂದೇ ಅರ್ಜಿದಾರರು ವಿಭಿನ್ನ ವಕೀಲರ ಮೂಲಕ ಒಂದೇ ಸತ್ಯಗಳ ಮೇಲೆ ಕಾನೂನಿನ ಅದೇ ಪ್ರಶ್ನೆಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ. ಇದನ್ನು ನಾವು ಅನುಮತಿಸುವುದಿಲ್ಲ. ನಾವು ಒಂದು ಪ್ರಕರಣದಲ್ಲಿ ಒಂದೇ ಸಲ್ಲಿಕೆಯನ್ನು ಕೇಳುತ್ತೇವೆ ಎಂದು ಹೇಳಿದರು.

ವಕೀಲ ರವಿವರ್ಮ ಕುಮಾರ್ ಅವರು, ಸಂಸ್ಥೆಯಲ್ಲಿ ನೀತಿ ಸಂಹಿತೆ ಇಲ್ಲ. ಯೂನಿಫಾರ್ಮ್ ಡ್ರೆಸ್ ಕೋಡ್ ಬಗ್ಗೆ ಸರಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುತ್ತದೆ. ಸದ್ಯಕ್ಕೆ ಸರಕಾರವು ಯಾವುದೇ ಸಮವಸ್ತ್ರವನ್ನು ಸೂಚಿಸಿಲ್ಲ ಅಥವಾ ಹಿಜಾಬ್ ಧರಿಸುವುದನ್ನು ನಿಷೇಧಿಸಿಲ್ಲ. ಸರಕಾರದ ಆದೇಶದಲ್ಲಿಯೂ ಹಿಜಾಬ್ ಧರಿಸಲು ಯಾವುದೇ ನಿಷೇಧವಿಲ್ಲ. ಸಮವಸ್ತ್ರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸರಕಾರ ಹೇಳಿದೆ. ಸಿಡಿಸಿ ಅದನ್ನು ಶಿಫಾರಸು ಮಾಡುತ್ತದೆ ಎಂದು ಸರಕಾರದ ಆದೇಶ ಹೇಳುತ್ತದೆ. ಅಲ್ಲಿಯವರೆಗೆ, ಸಾರ್ವಜನಿಕ ಸುವ್ಯವಸ್ಥೆ, ಸಮಾನತೆ ಅಥವಾ ಏಕತೆಗೆ ಧಕ್ಕೆಯಾಗದ ಬಟ್ಟೆಗಳನ್ನು ಧರಿಸಬೇಕು ಎಂದು ಅದು ಹೇಳಿದೆ. ಶಾಸನದ ಅಡಿಯಲ್ಲಿ ಅಸ್ತಿತ್ವದಲ್ಲಿಲ್ಲದ ಸಂಸ್ಥೆಯಾದ ಕಾಲೇಜು ಅಭಿವೃದ್ಧಿ ಸಮಿತಿಗೆ ಇದು ಕಾನೂನು-ಬಾಹಿರ ಅಧಿಕಾರವಾಗಿದ್ದು, ಈಗ ಸಮವಸ್ತ್ರ ಸೂಚಿಸುವ ಅಧಿಕಾರ ಹೊಂದಿದೆ ಎಂದು ವಾದಿಸಿದರು.

ಜೊತೆಗೆ ನಾಳೆ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರನ್ನು ತಡೆಯುವ ಮೂಲಕ ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದರು. ಇದಕ್ಕೆ ಅಡ್ವೊಕೇಟ್ ಜನರಲ್ ಆಕ್ಷೇಪಣೆ ಎತ್ತಿದರು. ಮುಖ್ಯ ನ್ಯಾಯಮೂರ್ತಿಗಳು ಇದು ಸರಿಯಾದ ಪದ್ಧತಿಯಲ್ಲ. ವಕೀಲರು ಅಫಿಡವಿಟ್ ಅನ್ನು ಪ್ರತಿಜ್ಞೆ ಮಾಡುವಂತಿಲ್ಲ. ವಕೀಲರು ಸಲ್ಲಿಸಿದ ಅಫಿಡವಿಟ್ ತಿರಸ್ಕರಿಸಲಾಗಿದೆ ಎಂದರು. ಅಲ್ಲದೇ ನಾವು ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!