ಹಿಜಾಬ್‌ ಕುರಿತ ಹೈಕೋರ್ಟ್‌ ತೀರ್ಪು ಶಿಕ್ಷಣ ಸಂಸ್ಥೆಗಳಲ್ಲಿ ಪಾಲನೆಯಾಗಲಿದೆ: ಸಚಿವ ಮಾಧುಸ್ವಾಮಿ

ಹೊಸದಿಗಂತ ವರದಿ, ಮೈಸೂರು
ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಹಿಜಾಬ್‌ ನಿರ್ಬಂಧದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ತೀರ್ಪು  ಪಾಲನೆಯಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಭಾನುವಾರ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಿಜಾಬ್ ವಿಚಾರವಾಗಿ ಹೈಕೋರ್ಟ್ ತ್ರಿ ಸದಸ್ಯ ಪೀಠ ತೀರ್ಪು ನೀಡಿದೆ. ಅದನ್ನು ಪಾಲನೆ ಮಾಡಬೇಕು. ನಮಗೆ ಹಿಜಾಬ್ ಮುಖ್ಯ ಎಂದು ಪರೀಕ್ಷೆ ಬರೆಯಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರೆ ಏನು ಮಾಡಲು ಸಾಧ್ಯ? ಕೋರ್ಟ್ ತೀರ್ಪನ್ನು ಗೌರವಿಸುವುದಿಲ್ಲ ಎಂದರೆ ನ್ಯಾಯಾಂಗದ ತೀರ್ಪಿಗೆ ಬೆಲೆಯೇನು ಎಂದು ಪ್ರಶ್ನಿಸಿದರು.
ಕೋರ್ಟ್ ಆದೇಶದ ಅನುಸಾರ ನಾವು ನಡೆದುಕೊಳ್ಳುತ್ತೇವೆ. ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ಹಾಗೂ ಕಾವೇರಿ ನೀರಿನ ವಿಚಾರ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗದಿದ್ದಾಗ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ನಾವು ಅಂತಹ ತಪ್ಪು ಮರುಕಳಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ಶಿಕ್ಷಣ ಮಂತ್ರಿಗಳೂ ಕೂಡ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದಿ ಕಾಶ್ಮೀರ್ ಫೈಲ್ ಸಿನಿಮಾ ವಿಚಾರದಲ್ಲಿ ರಾಜಕೀಯ ಸಲ್ಲದು. ನಮಗೆ ಇಷ್ಟವಾಗಿದೆ ನಾವು ಸಿನಿಮಾ ನೋಡಿದ್ದೇವೆ. ಇಷ್ಟವಿಲ್ಲದವರು ನೋಡಿಲ್ಲ ಅಷ್ಟೇ. ಸಿನಿಮಾಗಳು ನೈಜತೆಯನ್ನು ಬಿಂಬಿಸಿದರೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನ ಬಿಟ್ಟು ಅತಿರೇಕದಿಂದ ವರ್ತಿಸಬಾರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!