ನಾಳೆ ಹೈಕೋರ್ಟ್ ನಲ್ಲಿ ಹಿಜಾಬ್ ತೀರ್ಪು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಹೊಸದಿಗಂತ ವರದಿ, ಮಂಗಳೂರು:

ಹೈಕೋರ್ಟ್ ನಿಂದ ಹಿಜಾಬ್ ವಿವಾದ ಕುರಿತ ತೀರ್ಪು ಮಾ.15 ರಂದು ಹೊರಬೀಳಲಿದ್ದು, ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಿದೆ.
ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಯಥಾಸ್ಥಿತಿ
ಶಾಲಾ ಕಾಲೇಜುಗಳಲ್ಲಿನ ಆಂತರಿಕ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಆದರೆ ಈಗಾಗಲೇ ನಿಗದಿಪಡಿಸಿರುವ ಸಹಾಯಕ ಪ್ರಾಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಮಾ.19 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲಾ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಈಗಾಗಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಸೆಕ್ಷನ್ ಜಾರಿ ಇರುವ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಒಡಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಅಲ್ಲದೆ ಬೊಬ್ಬೆ ಹಾಕುವುದು, ಭಿತ್ತಿ ಪತ್ರಗಳನ್ನು ಅಂಟಿಸುವುದು, ಶಸ್ತ್ರ, ದೊಣ್ಣೆ, ಲಾಠಿ ಇತ್ಯಾದಿಗಳೊಂದಿಗೆ ಒಡಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೆ ಪಟಾಕಿ ಸಿಡಿಸುವುದು, ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!