ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಉದ್ಯಮಿ ಗೌತಮ್ ಅದಾನಿ ಮೇಲೆ ಆರೋಪ ನಡೆಸಿದ ನಂತರ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಇದೀಗ “ಮತ್ತೊಂದು ದೊಡ್ಡ” ತನಿಖಾವರದಿಯನ್ನು ಬಹಿರಂಗಪಡಿಸುವುದಾಗಿ ಘೋಷಿಸಿದೆ. ಇದು ಹಿಂಡೆನ್ ಬರ್ಗ್ ಮುಂದಿನ ಟಾರ್ಗೆಟ್ ಯಾರು ಎಂಬ ಕುರಿತು ಜನರಲ್ಲಿ ಕುತೂಹಲ ಮೂಡಿಸಿದೆ.
ಗುರುವಾರ, ಹಿಂಡೆನ್‌ಬರ್ಗ್ ರಿಸರ್ಚ್ ಶೀಘ್ರದಲ್ಲೇ ಮತ್ತೊಂದು ದೊಡ್ಡ ಹೊಸ ವರದಿಯನ್ನು ಪ್ರಕಟಿಸುವುದಾಗಿ ಟ್ವೀಟ್ ಮಾಡಿದೆ.
ಯುಎಸ್ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ಜನವರಿ 24 ರಂದು ಅದಾನಿ ಗುಂಪಿನ ಮೇಲೆ 106 ಪುಟಗಳ ಸುದೀರ್ಘ ವರದಿ ಪ್ರಕಟಿಸಿ ಸಂಸ್ಥೆಯು ವಿವಿಧ ಹಣಕಾಸಿನ ದುರುಪಯೋಗಗಳನ್ನು ನಡೆಸಿದೆ ಎಂದು ಆರೋಪಿಸಿತ್ತು. ಇದರಿಂದಾಗಿ ಅದಾನಿ ಕಂಪನಿಯ ಷೇರುಗಳು ದಲಾಲ್ ಸ್ಟ್ರೀಟ್ ನಲ್ಲಿ ಭಾರೀ ನಷ್ಟ ಅನುಭವಿಸಿದ್ದವು. ಅದಾನಿ ಸಮೂಹದ ಹತ್ತಾರು ಕಂಪನಿಗಳು ಲಕ್ಷಾಂತರ ಕೋಟಿ ರೂ. ಕಳೆದುಕೊಂಡಿದ್ದವು.
ಅದಾನಿ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇದೀಗ ಹಿಂಡೆನ್‌ಬರ್ಗ್ ಮತ್ತೊಂದು ಟ್ವೀಟ್ ಮಾಡಿದ್ದು ಮತ್ತೊಂದು ದೊಡ್ಡ ಆಘಾತದ ಮುನ್ಸೂಚನೆ ನೀಡಿದೆ. ಯಾರ ಕುರಿತಾಗಿ ಹೊಸ ವರದಿ ಬರಲಿದೆ ಎಂಬುದನ್ನು ಹಿಂಡೆನ್‌ಬರ್ಗ್ ರಿಸರ್ಚ್ ಬಹಿರಂಗಪಡಿಸಿಲ್ಲ.