ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮೂಲಕ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್ಬರ್ಗ್ ಸೆಬಿ ಅಧ್ಯಕ್ಷರು ಮತ್ತು ಅದಾನಿ ಗ್ರೂಪ್ ನಡುವೆ ಸಂಬಂಧವಿದೆ ಎಂದು ಆರೋಪಿಸಿ ಮಾಡಿರುವ ವರದಿಯ ವಿರುದ್ಧ ಆಗಸ್ಟ್ 22 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಮಂಗಳವಾರ ಘೋಷಿಸಿದೆ.
ವರದಿಯ ಆರೋಪಗಳ ಹಿನ್ನೆಲೆಯಲ್ಲಿ ಸೆಬಿ ಅಧ್ಯಕ್ಷ ಸ್ಥಾನದಿಂದ ಮಾಧಾಬಿ ಬುಚ್ ಅವರನ್ನು ತೆಗೆದುಹಾಕಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಮತ್ತು ರಾಜ್ಯ ಮುಖ್ಯಸ್ಥರ ಸಭೆಯ ನಂತರ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಈ ಘೋಷಣೆ ಮಾಡಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದರು.
ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಹಗರಣಗಳಲ್ಲೊಂದನ್ನು ಹಿಂಡೆನ್ಬರ್ಗ್ ಬಹಿರಂಗಪಡಿಸಿದೆ. ಅದಾನಿ ಮತ್ತು ಸೆಬಿಗೆ ಸಂಬಂಧಿಸಿದ ಹಗರಣದ ಬಗ್ಗೆ ನಾವು ಚರ್ಚಿಸಿದ್ದೇವೆ . ಅದಾನಿ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ಪಕ್ಷದ ನಾಯಕತ್ವ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಜೈರಾಮ್ ರಮೇಶ್ ಹೇಳಿದರು.
ಈ ವಿಷಯದ ಬಗ್ಗೆ ಎರಡು ವಿಷಯಗಳಿಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ನಾವು ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ಒಂದು ಅದಾನಿ ಮೆಗಾ ಹಗರಣದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕು. ಇದರಲ್ಲಿ ಪ್ರಧಾನಿ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ. ಷೇರು ಮಾರುಕಟ್ಟೆ ನಿಯಂತ್ರಣವು ಈಗ ತೀವ್ರವಾಗಿ ಸ್ವಜನಪಕ್ಷಪಾತ ನಡೆಸಿರುವುದು ಕಂಡುಬಂದಿದೆ ಎಂದು ಹೇಳಿದರು.
ಅದಾನಿ ಮನಿ ಸ್ಪೋನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಿ ಸಂಸ್ಥೆಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧಾಬಿ ಪುರಿ ಬುಚ್ ಮತ್ತು ಅವರ ಪತಿ ಪಾಲನ್ನು ಹೊಂದಿದ್ದಾರೆ ಎಂದು ಹಿಂಡೆನ್ಬರ್ಗ್ ರಿಸರ್ಚ್ ಹೇಳಿದೆ. ಆದರೆ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಗ್ರೂಪ್ ಆಫ್ ಕಂಪನಿಗಳಿಗೆ ಪಕ್ಷಪಾತ ಮಾಡಿರುವ ಆರೋಪಗಳನ್ನು ಸೆಬಿ, ಮಾಧಾಬಿ ಬುಚ್ ಮತ್ತು ಅವರ ಪತಿ ನಿರಾಕರಿಸಿದ್ದಾರೆ.