ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಸಮೂಹದ ಕುರಿತಾಗಿ ಅಮೆರಿಕದ ತನಿಖಾ ಸಂಸ್ಥೆ ಹಿಂಡೆನ್ ಬರ್ಗ್ ಪ್ರಕಟಿಸಿರೋ ವರದಿಯನ್ನು ಸುಳ್ಳಿನ ಕಂತೆ ಎಂದಿರುವ ಅದಾನಿ ಸಮೂಹವು 413 ಪುಟಗಳ ಸುದೀರ್ಘಪಟ್ಟಿಯಲ್ಲಿ ಹಿಂಡೆನ್ ಬರ್ಗ್ ಸಂಶೋಧನಾ ವರದಿಯನ್ನು ʼಭಾರತದ ಮೇಲಿನ ಲೆಕ್ಕಾಚಾರದ ದಾಳಿʼ ಎಂದು ಆರೋಪಿಸಿದೆ. ಆದರೆ ಈ ಕುರಿತು ಹಿಂಡೆನ್ ಬರ್ಗ್ ಸಂಸ್ಥೆಯೂ ಪ್ರತಿಕ್ರಿಯೆ ನೀಡಿದ್ದು ʼರಾಷ್ಟ್ರೀಯತೆಯ ಹೆಸರಿನಲ್ಲಿ ವಂಚನೆಯನ್ನು ಮುಚ್ಚಿಡಲು ಸಾಧ್ಯವಿಲ್ಲʼ ಎಂದು ಟೀಕಿಸಿದೆ.
ಅದಾನಿ ಸಮೂಹವು ರಾಷ್ಟ್ರೀಯತೆಯ ನಿರೂಪಣೆಯ ಮೂಲಕ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದಿರುವ ಹಿಂಡೆನ್ ಬರ್ಗ್ ʼಅದಾನಿ ಸಮೂಹವು ಅದರ ಅಧ್ಯಕ್ಷ ಗೌತಮ್ ಅದಾನಿಯ ಸಂಪತ್ತನಿ ಏರಿಕೆಯನ್ನು ಭಾರತದ ಅಭಿವೃದ್ಧಿಯೆಂಬಂತೆ ಬಿಂಬಿಸುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ಭಾರತವು ಉತ್ತಮ ಭವಿಷ್ಯ ಹೊಂದಿದ್ದು ಉದಯೋನ್ಮುಖ ಸೂಪರ್‌ಪವರ್ ದೇಶ ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ ಅದಾನಿ ಗ್ರೂಪ್ ಭಾರತವನ್ನು ಲೂಟಿ ಮಾಡುತ್ತಿದ್ದು ಭಾರತದ ಭವಿಷ್ಯಕ್ಕೆ ಅಡ್ಡಗಾಲಾಗುತ್ತಿದೆ. ʼವಿಶ್ವದ ಶ್ರೀಮಂತ್ ವ್ಯಕ್ತಿ ಮಾಡಿದರೂ ವಂಚನೆಯು ವಂಚನೆಯೇ.. ” ಎಂದು ಹಿಂಡನ್ ಬರ್ಗ್ ಆರೋಪಿಸಿದೆ.
“ನಾವು ಎತ್ತಿರುವ 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಉತ್ತರಿಸಲು ಅದಾನಿ ವಿಫಲರಾಗಿದ್ದಾರೆ ಮತ್ತು ಉತ್ತರಿಸಿರುವ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಲು ಅದಾನಿ ಸಮೂಹ ವಿಫಲವಾಗಿದೆ” ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ.