ಹಿಂದು ಸಂಸ್ಕೃತಿಯ ಗೇಲಿಗೆ ಬೆಲೆ ತೆರುತ್ತಿದೆಯಾ ನೆಟ್ಫ್ಲಿಕ್ಸ್? ಭಾರತದಲ್ಲಿ ಯಶಸ್ಸೇ ಸಿಗ್ತಿಲ್ಲ ಅಂತ ಅಲವತ್ತುಕೊಂಡ ಸಿಇಒ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚಂದಾದಾರಿಕೆಯ ಆಧಾರದಲ್ಲಿ ಅಂತರ್ಜಾಲದಲ್ಲಿ ಮನರಂಜನೆ ಒದಗಿಸುವ ವೇದಿಕೆಗಳಲ್ಲೊಂದಾದ ನೆಟ್ಫ್ಲಿಕ್ಸ್ ಬೆಳವಣಿಗೆ ಭಾರತದಲ್ಲಿ ಕುಸಿತ ಕಂಡಿದೆ. 2020ರಲ್ಲಿ ಹತ್ತಿರ ಹತ್ತಿರ 4 ಕೋಟಿಯಷ್ಟು ಭಾರತೀಯ ಚಂದಾದಾರರನ್ನು ಹೊಂದಿದ್ದ ನೆಟ್ ಫ್ಲಿಕ್ಸ್ 2021ರ ವೇಳೆಗೆ 2 ಕೋಟಿಗಿಂತ ಕೆಳಗೆ ಚಂದಾದಾರಿಕೆಯಲ್ಲಿ ಕುಸಿಯಿತು. ಇದರ ಪರಿಣಾಮವೆಂಬಂತೆ ಕಂಪನಿಯ ಷೇರುಮೌಲ್ಯ ಸಹ ಕುಸಿದಿದೆ.

ಈ ಕೆಳಗಿರುವುದು ಬ್ಲೂಮ್ಬರ್ಗ್ ಪ್ರಕಟಿಸಿರುವ ಕೋಷ್ಟಕ. ಇದರಲ್ಲಿ 2015ರಿಂದ ಭಾರತದಲ್ಲಿ ಏರುಗತಿ ಕಂಡಿದ್ದ ನೆಟ್ಫ್ಲಿಕ್ಸ್ ಈಗ ಹೇಗೆ ಕುಸಿತ ಕಾಣುತ್ತಿದೆ ಎಂಬುದು ಬಿಂಬಿತವಾಗಿದೆ.

ಜನವರಿ 20ರಂದು ಹೂಡಿಕೆದಾರರೊಂದಿಗಿನ ಮಾತುಕತೆಯಲ್ಲಿ ಕಂಪನಿಯ ಸಿ ಇ ಒ ರೀಡ್ ಹೇಸ್ಟಿಂಗ್ಸ್ ಭಾರತದಲ್ಲಿ ನೆಟ್ಫ್ಲಿಕ್ಸ್ ಬೆಳವಣಿಗೆ ಕುಂಠಿತವಾಗಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಇದಕ್ಕೆ ಭಾರತದಲ್ಲಿ ಅಂತರ್ಜಾಲದಲ್ಲಿ ಸಕ್ರಿಯವಾಗಿರುವ ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಭಾರತದ ಸಂಸ್ಕೃತಿಯನ್ನು ನಕಾರಾತ್ಮಕವಾಗಿ ಬಿಂಬಿಸುವ ಕತೆಗಳನ್ನೇ ಪ್ರದರ್ಶಿಸುತ್ತ, ಭಾರತದಲ್ಲಿ ಬೆಳವಣಿಗೆ ಆಗಬೇಕು ಅಂದರೆ ಹೇಗೆ ಸಾಧ್ಯ ಎಂದು ನೆಟ್ಟಿಗರು ಕಟಕಿಯಾಡಿದ್ದಾರೆ.

ಉದ್ಯಮಿ ಮೋಹನದಾಸ ಪೈ ಅವರು ಟ್ವಿಟರ್ ಮೂಲಕ ಹೀಗೆ ಪ್ರತಿಕ್ರಿಯಿಸಿದ್ದಾರೆ- ಭಾರತದ ಬಹುಸಂಖ್ಯಾತ ಹಿಂದುಗಳನ್ನು ಅವಮಾನಿಸುವ ರೀತಿಯ ನಿಮ್ಮ ಕಾರ್ಯಕ್ರಮಗಳೇ ನಿಮ್ಮ ಹತಾಶೆಗೆ ಕಾರಣ. ಮೊದಲು ನೋಡುಗರನ್ನು ಗೌರವಿಸುವುದನ್ನು ಕಲಿಯಿರಿ ಎಂದಿದ್ದಾರೆ.

ನೆಟ್ಫ್ಲಿಕ್ಸ್ ಹಿಂದು ವಿರೋಧಿ ಕಾರ್ಯಕ್ರಮಗಳು ಹೇಗಿವೆ ಎಂಬ ಬಗ್ಗೆ ಅಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳನ್ನು ಪರ್ತಕರ್ತೆ ಶುಭಾಂಗಿ ಶರ್ಮ ಪಟ್ಟಿ ಮಾಡಿದ್ದಾರೆ. “ಭಾರತದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದು ಹತಾಶೆ ಪಡುತ್ತಿರುವ ನೆಟ್ಫ್ಲಿಕ್ಸ್ ಭಾರತಕ್ಕೆ ಮಾಡಿರುವ ಕಾರ್ಯಕ್ರಮಗಳನ್ನು ಗಮನಿಸಿ.. ‘ಹಿಂದು ಸಮಾಜ ಪತನವಾಗಿದೆ ಎಂದು ವ್ಯಾಖ್ಯಾನಿಸುವ ಲೈಲಾ’, ‘ಕೃಷ್ಣ ಮತ್ತವನ ಲೀಲೆ’ ಎಂಬ ಪ್ರಚೋದನಾತ್ಮಕ ಶೋ, ‘ಭಾರತವನ್ನು ತೆಗಳುವ ವೀರ್ ದಾಸ್ ಕಾಮಿಡಿಗಳು’, ಇಂಥ ಕುಹಕ ಮನಸ್ಥಿತಿಯ ಕಂಟೆಂಟ್ ಇಟ್ಟುಕೊಂಡು ಬೆಳೆಯುವುದು ಹೇಗೆ? ಭಾರತದಲ್ಲಿ ಕಂಟೆಂಟ್ ಸೃಷ್ಟಿಸುತ್ತಿರುವ ತಂಡವನ್ನು ಬದಲುಮಾಡಲಿ.”

ಭಾರತವನ್ನು ಅರ್ಥ ಮಾಡಿಕೊಳ್ಳದೇ ಬಿ ಎಂ ಡಬ್ಲ್ಯುದಲ್ಲಿ ಓಡಾಡುವ, ಸ್ಟಾರ್ ಬಕ್ಸ್ ನಲ್ಲಿ ಕಾಫಿ ಕುಡಿಯುವ ಜನಕ್ಕೆ ಅಂತ ಕಂಟೆಂಟ್ ಮಾಡಿದರೆ ಯಶಸ್ಸು ಸಿಗೋದು ಹೇಗೆ ಎಂದೂ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!