ಗಡಿಪಾರು ನೋಟೀಸ್ ಹಿಂಪಡೆಯಲು ಹಿಂ.ಜಾ.ವೇ ಒತ್ತಾಯ !

ಹೊಸದಿಗಂತ ವರದಿ ಸೋಮವಾರಪೇಟೆ :

ಹಿಂದೂ ಕಾರ್ಯಕರ್ತರ ಗಡಿಪಾರು ನೋಟಿಸ್ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಕೊಡಗು ಜಿಲ್ಲೆಯ ಹಿಂದೂ ಸಾಮಾಜಿಕ ಕಾರ್ಯಕರ್ತರಾದ ಕವನ್ ಕಾವೇರಪ್ಪ ಹಾಗೂ ವಿನಯ್ ಅವರುಗಳನ್ನು ಗಡಿಪಾರು ಮಾಡುವ ಕುರಿತು ನೀಡಿರುವ ನೋಟಿಸ್ ಕ್ರಮವನ್ನು ವಿರೋಧಿಸಿ‌ ಶನಿವಾರ ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸಂಘಟನೆಯ ತಾಲೂಕು ಸಂಚಾಲಕ ಭೋಜೇಗೌಡ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ದಮನಿಸುವ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿರುವುದು ವಿಪರ್ಯಾಸ. ಹಿಂದೂ ಸಂಘಟನೆಗಳು ಬಲಿಷ್ಟವಾಗಿರುವಲ್ಲಿ ಶಾಂತಿಯ ವಾತಾವರಣವಿರುತ್ತದೆ ಇದನ್ನು ಸಹಿಸದ ದುಷ್ಟ ಶಕ್ತಿಗಳು ಕೆಲವರನ್ನು ಗಡಿಪಾರು ಮಾಡಲು ಹವಣಿಸುತ್ತಿವೆ ಎಂದು ಆರೋಪಿಸಿದ ಅವರು, ಗಡಿಪಾರು ಮಾಡಲು ಕಾರಣ ಕೇಳಿ ನೀಡಿರುವ ನೋಟಿಸನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಹಿಂ.ಜಾ.ವೇ ಜಿಲ್ಲಾ ಘಟಕದ ಪ್ರಮುಖರಾದ ಸುಭಾಷ್ ತಿಮ್ಮಯ್ಯ ,ಉಮೇಶ್, ಸುನಿಲ್ ಮಾದಪ್ಪ, ತಾಲೂಕು ಪ್ರಮುಖರಾದ ವಿನು, ಗಿರೀಶ್, ಮಾದಪ್ಪ, ವಿಶ್ವ ಹಿಂದೂ ಪರಿಷತ್ ನ ಹುಲ್ಲೂರಿಕೊಪ್ಪ ಚಂದ್ರು, ಕೆ.ಜಿ.ಸುರೇಶ್, ಬಿಜೆಪಿಯ ದರ್ಶನ್ ಜೋಯಪ್ಪ, ರೂಪಾ ಸತೀಶ್, ದೀಪಕ್ ಮುಂತಾದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!