ಈ ವ್ಯಂಗ್ಯಚಿತ್ರಕಾರರ ಹತ್ತು ವರ್ಷಗಳನ್ನೇ ಕಿತ್ತುಕೊಂಡ ಮಮತಾ ಬ್ಯಾನರ್ಜಿ- ಈಗೆಲ್ಲಿದ್ದಾರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರರು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬರೋಬ್ಬರಿ 10 ವರ್ಷಗಳ ನಂತರ ಅಂಬಿಕೇಶ್ ಮಹಾಪಾತ್ರ ಎನ್ನುವ ವ್ಯಕ್ತಿ ಆರೋಪಮುಕ್ತರಾಗಿದ್ದಾರೆ. ಅವರು ಮಾಡಿದ್ದ ತಪ್ಪೆಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಂಬಂಧಿಸಿದ ಕಾರ್ಟೂನ್ ಹಂಚಿಕೊಂಡಿದ್ದು!
ಜಿಲ್ಲಾ ನ್ಯಾಯಾಲಯವೀಗ ಅವರನ್ನು ದೋಷಮುಕ್ತ ಎಂದು ಸಾರಿದೆ. ತೀರ್ಪಿಗೆ ಪ್ರತಿಕ್ರಿಯಿಸುತ್ತ ಅಂಬಿಕೇಶ್ ಮಹಾಪಾತ್ರ ನೀಡಿರುವ ಪ್ರತಿಕ್ರಿಯೆ “ತೀರ್ಪಿನಿಂದ ಖುಷಿಯಾಗಿದೆ. ಆದರೆ ನನ್ನ ಹತ್ತು ವರ್ಷಗಳನ್ನು ಯಾರು ಹಿಂತಿರುಗಿಸುತ್ತಾರೆ. ಪ್ರಕರಣದಲ್ಲಿ ಹುರುಳಿಲ್ಲದಿದ್ದರೂ ಇದನ್ನು ಹತ್ತು ವರ್ಷಗಳ ಕಾಲ ಬೇಕಂತಲೇ ಎಳೆಯಲಾಯಿತು.”

ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದೇನು ಅಂತ ನೋಡುವುದಾದರೆ, ಜಾಧವಪುರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದ ಅಂಬಿಕೇಶ್‌ ಮಹಾಪಾತ್ರ ಮಮತಾ ಬ್ಯಾನರ್ಜಿಯವರ ಕುರಿತಾಗಿನ ವ್ಯಂಗ್ಯ ಚಿತ್ರವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಬ್ಯಾನರ್ಜಿ ಸರ್ಕಾರವು ಆತನನ್ನು ಬಂಧಿಸಿದ್ದಲ್ಲದೇ ಆತನ ಮೇಲೆ ಹಲ್ಲೆಯನ್ನೂ ನಡೆಸಿತ್ತು. 2012ರ ಸಮಯದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ದಿನೇಶ್‌ ತ್ರಿವೇದಿ ಎಂಬುವವರು ರೇಲ್ವೇ ಬಜೆಟ್ಟನ್ನು ಮಂಡಿಸಿದ್ದರು. ಆದರೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿಗೆ ಇದರಲ್ಲಿನ ಕೆಲ ಅಂಶಗಳು ಹಿಡಿಸಿರಲಿಲ್ಲ. ಬಜೆಟ್‌ ಶಾಸನಸಭೆಯ ಒಪ್ಪಿಗೆ ಗಳಿಸಿತ್ತು, ಆದರೂ ಮಮತಾ ಬ್ಯಾನರ್ಜಿ ದಿನೇಶ್‌ ತ್ರಿವೇದಿಯವರನ್ನು ರೇಲ್ವೇ ಸಚಿವ ಸ್ಥಾನದಿಂದ ಕೆಳಗಿಳಿಸಿ ಆ ಜಾಗಕ್ಕೆ ಮುಕುಲ್‌ ರಾಯ್‌ ಎಂಬುವವರನ್ನು ತಂದು ಕೂರಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರೋ ಕಳಿಸಿದ್ದ ವ್ಯಂಗ್ಯಚಿತ್ರವನ್ನು ಅಂಬಿಕೇಶ್‌ ಮಹಾಪಾತ್ರ ತಮ್ಮ ಇ-ಮೇಲ್‌ ನಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲ ಸಮಯದಲ್ಲಿಯೇ ಇವರನ್ನು ಪೋಲೀಸರು ಹುಡುಕಿಕೊಂಡು ಬಂದಿದ್ದರು. ಅವರ ಕೈಗೆ ವ್ಯಂಗ್ಯಚಿತ್ರವನ್ನಿಟ್ಟು ಇದನ್ನು ನೀವು ಹಂಚಿಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಅಂಬಿಕೇಶ್‌ ಮಹಾಪಾತ್ರ ಹೌದೆಂದಾಗ ಮರುಮಾತಾಡಲೂ ಅವಕಾಶ ನೀಡದೆ ಅವರಿಗೆ ಹಿಗ್ಗಾಮುಗ್ಗಾ ಥಳಿಸಲಾಯಿತು. ಕೊನೆಗೆ ಅವರಿಗೆ ಬಿಳಿಹಾಳೆಯೊಂದನ್ನು ನೀಡಿ ಅದರ ಮೇಲೆ ಇದು ಉದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದು, ಮುಂಚೆಯೇ ಯೋಜಿತ ಉದ್ದೇಶಗಳನ್ನಿಟ್ಟುಕೊಂಡು ಹಂಚಿಕೊಳ್ಳಲಾಗಿದೆ ಎಂದು ಬರೆದು ಸಹಿಹಾಕುವಂತೆ ಒತ್ತಾಯಿಸಲಾಗಿತ್ತು. ತಾನೊಬ್ಬ ಸಿಪಿಐ(ಎಂ) ಕಾರ್ಯಕರ್ತ ಎಂದು ಬರೆಯುವಂತೆಯೂ ಒತ್ತಾಯಿಸಲಾಗಿತ್ತು. ಆದರೆ ಮಹಾಪಾತ್ರ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಅವರ ಮೇಲೆ ಮಾಹಿತಂತ್ರಜ್ಞಾನ ಕಾಯಿದೆ 66(b) & (c) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಆದರೆ 2015ರಲ್ಲಿ ಭಾರತದ ಸುಪ್ರಿಂ ಕೋರ್ಟ್‌ ಈ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಹೊಡೆದು ಹಾಕಿತ್ತು. ಇದರನ್ವಯ ಮಹಾಪಾತ್ರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಬೇಕಿತ್ತು. ಆದರೆ ಮಮತಾ ಬ್ಯಾನರ್ಜಿ ಸರ್ಕಾರ ಈ ಪ್ರಕರಣವನ್ನು ಮುಂದಿನ 10 ವರ್ಷಗಳವರೆಗೂ ಎಳೆಯುವಂತೆ ಮಾಡಿತ್ತು. ಪರಿಣಾಮ ಮಹಾಪಾತ್ರರ ಜೀವನದ ಅಮೂಲ್ಯ 10 ವರ್ಷಗಳ ಸಮಯ ಬಹುತೇಕ ಈ ಪ್ರಕರಣವನ್ನು ಹೋರಾಡುವುದರಲ್ಲೇ ಖರ್ಚಾಗಿತ್ತು.

ಸುಳ್ಳುಕಥಾನಕಗಳಿಂದಲೇ ಸೃಷ್ಟಿಸಲ್ಪಟ್ಟಿದ್ದ ಬಿಬಿಸಿಯ ತಥಾಕಥಿತ ಸಾಕ್ಷ್ಯಚಿತ್ರವೊಂದನ್ನು ಸರ್ಕಾರ ನಿಷೇಧಿಸಿದ ತಕ್ಷಣವೇ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಗಲಾಟೆಯೆಬ್ಬಿಸುವ ಸ್ವಾತಂತ್ರ್ಯದ ಹರಿಕಾರರು, ಮೋದಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ ಅಂತ ಆಗಾಗ ಮಾಧ್ಯಮ ವೇದಿಕೆಗಳಲ್ಲಿ ದೂರುವ ಬುದ್ಧಿಜೀವಿಗಳ್ಯಾರೂ ಅಂಬಿಕೇಶ್ ಮಹಾಪಾತ್ರ ಪ್ರಕರಣದ ಬಗ್ಗೆ ಆಸಕ್ತಿಯನ್ನೇ ವಹಿಸಲಿಲ್ಲ. ಆ ಬಗ್ಗೆ ಚರ್ಚೆ-ಮಾತುಕತೆಗಳಾಗಲೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ಕೂಗುಗಳಲ್ಲಿ ಹೆಚ್ಚಿನವು ಕೇವಲ ರಾಜಕೀಯ ನೆಲೆಯವೇ ಎಂಬ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!