ಹಿಂದು ಮಹಾಗಣಪತಿ ವಿಸರ್ಜನೆ ಸಂಭ್ರಮ: ಬೃಹತ್ ಶೋಭಾಯಾತ್ರೆಗೆ ಹರಿದು ಬಂದ ಜನಸಾಗರ

ಹೊಸದಿಗಂತ ವರದಿ,ಚಿತ್ರದುರ್ಗ :

ವಿಶ್ವ ಹಿಂದೂ ಪರಿಷತ್ – ಬಜರಂಗದಳದ ವತಿಯಿಂದ ನಗರದ ಸಮಾಜ ಕಲ್ಯಾಣ ಇಲಾಖೆ ಬಳಿಯ ಜೈನಧಾಮದ ಆವರಣದಲ್ಲಿ ಕೂರಿಸಿದ್ದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಪ್ರವಾಹೋಪಾದಿಯಲ್ಲಿ ಸಾಗುತ್ತಿದ್ದರು. ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ನಗರದ ಬೀದಿಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ದೇಶದ ಮಹಾನ್ ನಾಯಕರ ಭಾವಚಿತ್ರಗಳನ್ನು ಹೊತ್ತ ವಿವಿಧ ವಾಹನಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಅನೇಕ ಜನ ಭಕ್ತರು ಟ್ರ್ಯಾಕ್ಟರ್‌ಗಳಲ್ಲಿ ಹೂವುಗಳನ್ನು ತುಂಬಿಕೊಂಡು ಬಂದು ವಿಶ್ವ ಹಿಂದೂ ಗಣಪತಿಗೆ ಪುಷ್ಪವೃಷ್ಠಿಗೈದರು. ಮೆರವಣಿಗೆಗೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ವಿವಿಧ ಸಂಘಟನೆಗಳು ಮಜ್ಜಿಗೆ, ನೀರು, ಉಪಾಹಾರ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಮಾರ್ಗದುದ್ದಕ್ಕೂ ಕುಣಿದು ದಣಿದ ಕಾರ್ಯಕರ್ತರ ದಾಹ ತಣಿಸುವ ಸಲುವಾಗಿ ವಿವಿಧ ಸಂಘ ಸಂಸ್ಥೆಗಳು ತಂಪುಪಾನೀಯ ವಿತರಿಸುತ್ತಿದ್ದವು.

ವಿವಿಧ ಹಿಂದೂಪರ ಸಂಘಟನೆಗಳ ಕಾಯರ್ಕಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯ ಯುವಕರು ವೀರಾಂಜನೇಯ, ಶಿವಾಜಿ ಮಹಾರಾಜ್, ಕಿಚ್ಚ ಸುದೀಪ್, ಯಶ್ ಚಿತ್ರಗಳಿರುವ ಭಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರು ಹಣೆಯಲ್ಲಿ ನಾಮ, ತಲೆಗೆ ಕೇಸರಿ ಪೇಟಗಳನ್ನು ಧರಿಸಿದ್ದರು. ಮಾರ್ಗದುದ್ದಕ್ಕೂ ಭಾರತಾಂಬೆಗೆ ಜೈ, ಕನ್ನಡಾಂಬೆಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದರೊಂದಿಗೆ ವಿವಿಧ ವಾದ್ಯಗಳ ನಿನಾದದಿಂದ ಇಡೀ ನಗರಕ್ಕೆ ನಗರವೇ ಮಾರ್ಧನಿಸಿದಂತಾಯಿತು.

ಡೊಳ್ಳು, ಚಮಾಳ, ಕರಡಿ ಮಜಲು, ತಮಟೆ ವಾದ್ಯ, ಊರಿಮೆ, ಡ್ರಮ್ಸ್, ಚಂಡೆ ವಾದ್ಯ, ತಾಳ ಮದ್ದಲೆ ಸೇರಿದಂತೆ ಅನೇಕ ವಾದ್ಯಗಳು ಪ್ರತಿಧ್ವನಿಸಿದವು. ಕೊಂಬು ಕಹಳೆಗಳು ಮೊಳಗಿದವು. ಮೆರವಣಿಗೆಯಲ್ಲಿ ಧ್ವನಿ ಮಾಡುತ್ತಿದ್ದ ವಿವಿಧ ವಾದ್ಯಗಳು ಮೆರವಣಿಗೆಗೆ ವಿಶೇಷ ಕಳೆಯನ್ನುಂಟು ಮಾಡಿದ್ದವು. ವಿವಿಧ ಸಮಾಜ ಬಾಂಧವರು ತಮ್ಮದೇ ಆದ ವಾಹನಗಳಲ್ಲಿ ಬೃಹತ್ ಪ್ರಮಾಣದ ಸೌಂಡ್ ಬಾಕ್ಸ್‌ಗಳನ್ನು ಕಟ್ಟಿಕೊಂಡು ವಿವಿಧ ಬಗೆಯ ಗಾಯನಗಳನ್ನು ಹಾಕಿಕೊಂಡು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಮೆರವಣಿಗೆಯಲ್ಲಿ ವಾದ್ಯಗಳ ತಾಳ, ಮೈಕ್‌ಗಳ ಗಾಯನಕ್ಕೆ ಯುವಕರ ಪಡೆ ಮೈಮರೆತು ಕುಣಿಯುತ್ತಿತ್ತು.

ಇಡೀ ನಗರವನ್ನು ಕೇಸರಿ ಬಣ್ಣದ ಪಟ್ಟಿಗಳಿಂದ ಅಲಂಕರಿಸಲಾಗಿತ್ತು. ಕೆಲವು ಕಾರ್ಯಕರ್ತರು ಓಂ ಚಿಹ್ನೆಯುಳ್ಳ ಬೃಹತ್ ಗಾತ್ರದ ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಬೈಕ್, ಕಾರು ಜೀಪು, ಆಟೋ ರಿಕ್ಷಾ ಸೇರಿದಂತೆ ವಿವಿಧ ವಾಹನಗಳಿಗೆ ಕೇಸರಿ ಬಾವುಟಗಳನ್ನು ಹಾಕಿಕೊಂಡು ಸಾಗುತ್ತಿದ್ದ ದೃಶ್ಯ ನಗರದ ವಿವಿಧೆಡೆಗಳಲ್ಲಿ ಕಂಡುಬಂತು. ಮೆರವಣಿಗೆಯ ಮಾರ್ಗದುದ್ದಕ್ಕೂ ಕಾರ್ಯಕರ್ತರ ಸಿಳ್ಳೆ, ಕೇಕೆ, ಜಯಘೋಷಗಳು ಮುಗಿಲು ಮುಟ್ಟಿದವು. ಕುಣಿದು ದಣಿದವರಿಗೆ ದಣಿವಾರಿಸಿಕೊಳ್ಳಲು ಆಗಾಗ ನೀರಿನ ಬಾಟಲ್‌ಗಳನ್ನು ವಿತರಿಸಲಾಗುತ್ತಿತ್ತು.

ಗಣೇಶ ಮೂರ್ತಿಯನ್ನು ದೊಡ್ಡ ವಾಹನದಲ್ಲಿಟ್ಟು ಮೆರವಣಿಗೆಗೆ ನಡೆಸಲಾಯಿತು. ಗಣಪತಿ ಮೂರ್ತಿಗೆ ವಿವಿಧ ಪುಷ್ಪಗಳು, ಹಣ್ಣುಗಳಿಂದ ತಯಾರಿಸಿದ್ದ ಬೃಹತ್ ಪ್ರಮಾಣದ ಹಾರಗಳನ್ನು ಹಾಕಲಾಗಿತ್ತು. ಗಣೇಶನನ್ನು ಹೊತ್ತ ವಾಹನ ಗಜಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಸಾಗಿ ಬರುತ್ತಿತ್ತು. ಭಕ್ತರು ಹಣ್ಣು, ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕರ್ಪೂರದ ಆರತಿ ಮಾಡಿ ವಿಘ್ವೇಶನಿಗೆ ಭಕ್ತಿ ಸಮರ್ಪಿಸಿದರು. ಮೆರವಣಿಗೆ ಮಾರ್ಗಗಳಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಜನರು ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಂಡರು.

ಮಹರಾಷ್ಟ್ರದ ಕನ್ನೇರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೇಂದ್ರ ಸರ್ಕಾರದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕ ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಎಸ್.ಆರ್.ಪ್ರಭಂಜನ್, ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್, ಪಿ.ರುದ್ರೇಶ್, ಬದ್ರಿನಾಥ್, ಷಡಾಕ್ಷರಪ್ಪ ಸೇರಿದಂತೆ ಅನೇಕ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ ಅಂಗಡಿ ಮಾಲೀಕರು, ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಚಂದ್ರವಳ್ಳಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಮಾಡಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!