ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ದೇವಾಲಯದಲ್ಲಿದ್ದ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿರುವ ಘಟನೆ ಕರಾಚಿಯ ಕೋರಂಗಿ ಪ್ರದೇಶದಲ್ಲಿ ನಡೆದಿದೆ. ಕರಾಚಿಯಲ್ಲಿನ ಶ್ರೀಮರಿ ಮಾತಾ ಮಂದಿರಕ್ಕೆ ಬಂದ ಪುಂಡರು ಏಕಾಏಕಿ ದಾಳಿ ಮಾಡಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿದ್ದ ದೇವರ ಪ್ರತಿಮೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಕೂಡಲೇ ಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವ ಪೊಲೀಸರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಬಳಿಕ ಕರಾಚಿಯಲ್ಲಿರುವ ಹಿಂದೂಗಳು ಭಯಭೀತರಾಗಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಂಟು ಮಂದಿ ಪುಂಡರ ತಂಡ ಮೋಟಾರು ಸೈಕಲ್‌ಗಳಲ್ಲಿ ಬಂದು ದೇವಸ್ಥಾನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ವ್ಯಕ್ತಿ ಸಂಜೀವ್ ಮಾಹಿತಿ ನೀಡಿದ್ದಾರೆ. ಈ ಕೃತ್ಯದ ಹಿಂದೆ ಇರುವ ಕಾರಣ ನನಗೆ ಗೊತ್ತಿಲ್ಲ ಎಂದರು. ಇನ್ನೂ ದಾಳಿ ಮಾಡಿ ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷವೂ ಪಾಕಿಸ್ತಾನದ ಹಲವು ಭಾಗಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿತ್ತು. ಅಧಿಕೃತ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 75 ಲಕ್ಷ ಹಿಂದೂಗಳು ವಾಸ ಮಾಡುತ್ತಿದ್ದಾರೆ.