ನಮ್ಮ ಪೂರ್ವಜರು ಹಿಂದೂಗಳು, ಅವರ ಭಾವನೆ ಗೌರವಿಸಿ ಗೋಹತ್ಯೆ ಮಾಡಬೇಡಿ: ಸಂಸದ ಬದ್ರುದ್ದೀನ್ ಅಜ್ಮಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬರುವ ಜುಲೈ 10 ರಂದು ನಡೆಯಲಿರುವ ಈದ್ ಸಂದರ್ಭದಲ್ಲಿ ಗೋವುಗಳನ್ನು ಬಲಿ ನೀಡದಂತೆ ಮುಸ್ಲಿಂ ಸಮುದಾಯವನ್ನು ಅಸ್ಸಾಂ ಲೋಕಸಭೆ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಜ್ಮಲ್, “ನಮ್ಮ ಹಿಂದೂ ಸಹೋದರರ ಭಾವನೆಗಳನ್ನು ಗೌರವಿಸುವಂತೆ ನಾನು ಮನವಿ ಮಾಡಿದ್ದೇನೆ. ಅನೇಕ ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ಸಹ ಗೋಹತ್ಯೆಯನ್ನು ಬೆಂಬಲಿಸುವುದಿಲ್ಲ. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಹಿಂದೂಗಳ ಮತ್ತೊಂದು ಗುಂಪಿನ ದೌರ್ಜನ್ಯದಿಂದಾಗಿ, ನಮ್ಮ ಪೂರ್ವಜರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಮ್ಮ ಪೂರ್ವಜರ ನಂಬಿಕೆಗಳನ್ನು ಗೌರವಿಸೋಣ ಎಂದು ಹೇಳಿದ್ದಾರೆ.
“ಭಾರತವು ವಿವಿಧ ಸಮುದಾಯಗಳು, ಜನಾಂಗೀಯ ಗುಂಪುಗಳು ಮತ್ತು ಧರ್ಮಗಳ ವ್ಯಕ್ತಿಗಳಿಗೆ ನೆಲೆಯಾಗಿದೆ. ಹಸುವನ್ನು ಪವಿತ್ರ ಸಂಕೇತವಾಗಿ ಪೂಜಿಸುವ ಸನಾತನ ನಂಬಿಕೆಯನ್ನು ಬಹುಪಾಲು ಭಾರತೀಯರು ಆಚರಿಸುತ್ತಾರೆ. ಹಿಂದೂಗಳು ಹಸುವನ್ನು ತಾಯಿ ಎಂದು ನಂಬುತ್ತಾರೆ. ಅಲ್ಲದೆ, ಯಾವುದೇ ಪ್ರಾಣಿಗಳನ್ನು ನೋಯಿಸಬೇಡಿ ಎಂದು ಇಸ್ಲಾಂ ಹೇಳುತ್ತದೆ. ಅದಕ್ಕಾಗಿಯೇ ನಾನು ಈದ್ ಸಮಯದಲ್ಲಿ ಹಸುಗಳನ್ನು ಕೊಲ್ಲದಂತೆ ಮುಸ್ಲಿಮರಿಗೆ ಮನವಿ ಮಾಡುತ್ತೇನೆ.
ಧಾರ್ಮಿಕ ಜವಾಬ್ದಾರಿಯನ್ನು ಪೂರೈಸಲು ಮತ್ತು ಇತರರ ಭಾವನೆಗಳನ್ನು ನೋಯಿಸುವುದನ್ನು ತಪ್ಪಿಸಲು ಮುಸ್ಲಿಂ ಸಮುದಾಯವು ಇತರ ಪ್ರಾಣಿಗಳನ್ನು ಬಳಸಿ ‘ಕುರ್ಬಾನಿ’ (ಬಲಿ) ನೀಡುವಂತೆ ವಿನಂತಿಸಿದ್ದಾರೆ.
ದೇಶದ ಅತಿದೊಡ್ಡ ಇಸ್ಲಾಮಿಕ್ ಶೈಕ್ಷಣಿಕ ಸಂಸ್ಥೆಯಾದ ದಾರುಲ್ ಉಲೂಮ್ ದೇವ್ಬಂದ್ ಸಹ ಎರಡು ವರ್ಷಗಳ ಹಿಂದೆ ಈದ್‌ನಲ್ಲಿ ಹಸುಗಳನ್ನು ಬಲಿ ನೀಡುವುದನ್ನು ತಪ್ಪಿಸುವಂತೆ ಮನವಿ ಮಾಡಿತ್ತು ಎಂದು ಅಜ್ಮಲ್ ಹೇಳಿದರು.
ಈದೇ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅಜ್ಮಲ್, “ಹಿಂದೂ ರಾಷ್ಟ್ರ ಅಜೆಂಡಾವು  ಕೇವಲ ರಾಜಕೀಯ ಗಿಮಿಕ್ ಆಗಿದೆ, ಅವರು ಹಿಂದೂಗಳ ಮತಗಳನ್ನು ಗಳಿಸಲು ಇದನ್ನು ರಾಜಕೀಯ ಸಾಧನವಾಗಿ ಬಳಸುತ್ತಾರೆ. ಕನಸಿನಲ್ಲಿಯೂ ಹಿಂದೂರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಬದ್ರುದ್ದೀನ್ ಅಜ್ಮಲ್ ರ ಈ ಮನವಿಯು ಅಸ್ಸಾಂನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯದ ಅನೇಕ ಮುಸ್ಲಿಂ ನಾಯಕರು ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!