ಪೂಜಾ ಸ್ಥಳಗಳ ಕಾಯ್ದೆ ಹೆಸರಲ್ಲಿ ಹಿಂದುಗಳನ್ನು ಕಟ್ಟಿಹಾಕಲಾಗದು – ಜ್ಞಾನವಾಪಿ ಪ್ರಕರಣದ ಅಂತರಾಳವಿದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ಪ್ರಕರಣ ಹೊರತುಪಡಿಸಿ, ಉಳಿದೆಲ್ಲ ಪೂಜಾಸ್ಥಳಗಳ “ಧಾರ್ಮಿಕ ಚಹರೆ” 1948ರ ಆಗಸ್ಟ್ 15ರಲ್ಲಿ ಹೇಗಿತ್ತೋ ಹಾಗೆಯೇ ಮುಂದುವರಿಯುತ್ತದೆ ಎನ್ನುವುದು 1991ರಲ್ಲಿ ತಂದಿದ್ದ ಪೂಜಾಸ್ಥಳಗಳ ಕಾಯ್ದೆಯ ಸಾರಾಂಶ.

ಆದರೆ, ಮಂಗಳವಾರ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಹಿಂದುಪಕ್ಷಗಳ ಪ್ರಕರಣ ಆಲಿಸುವುದಕ್ಕೆ ಅವಕಾಶವೇ ಇಲ್ಲ ಎಂಬ ಮುಸ್ಲಿಂ ಪಕ್ಷದ ವಾದವನ್ನು ಪಕ್ಕಕ್ಕಿರಿಸೋ ಮೂಲಕ ಅಲಹಾಬಾದ್ ಹೈಕೋರ್ಟ್ ಹೊಸ ಆಯಾಮವನ್ನು ಕೊಟ್ಟಿದೆ. ಮುಸ್ಲಿಮರ ಎಲ್ಲ 5 ಆಕ್ಷೇಪಣಾ ಅರ್ಜಿಗಳು ವಜಾ ಆಗಿವೆ. ಇದು ಹಿಂದುಗಳಿಗೆ ಒಂದುಮಟ್ಟದ ಧ್ವನಿ ನೀಡಿದೆ ಎಂದೇ ವ್ಯಾಖ್ಯಾನಿಸಬಹುದು.

ಹಾಗಾದರೆ, 1991ರ ಪೂಜಾಸ್ಥಗಳ ಕಾಯ್ದೆಯನ್ನು ಈ ಪ್ರಕರಣದಲ್ಲಿ ಹೈಕೋರ್ಟ್ ವ್ಯಾಖ್ಯಾನಿಸಿರುವುದಾದರೂ ಹೇಗೆ?

1991ರ ಕಾಯ್ದೆ ಮುಂದಿರಿಸಿಕೊಂಡು ಈ ವ್ಯಾಜ್ಯವನ್ನು ಪಕ್ಕಕ್ಕಿಡಲಾಗುವುದಿಲ್ಲ ಎಂದಿರುವ ಜಸ್ಟೀಸ್ ರಂಜನ್ ಅಗರವಾಲ್ ಅವರು, ಇದೊಂದು ರಾಷ್ಟ್ರೀಯ ಪ್ರಾಮುಖ್ಯವಿರುವ ವಿವಾದ ಎಂದೂ ಹೇಳಿದ್ದಾರೆ.
ಈ ವಿಚಾರದಲ್ಲಿ ನ್ಯಾಯಮೂರ್ತಿಗಳು ಹೇಳಿರುವುದು- “1991ರ ಪೂಜಾಸ್ಥಳಗಳ ಕಾಯ್ದೆಯು ನಿರ್ದಿಷ್ಟ ಪೂಜಾ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ. ಆದರೆ ಇಲ್ಲಿ ಅರ್ಜಿದಾರರು ಇಂಥ ಪರಿವರ್ತನೆ ಮಾಡಿಕೊಡಿ ಎದು ಅರ್ಜಿ ಹಾಕಿಲ್ಲ. ಬದಲಿಗೆ ಆ ಆವರಣದಲ್ಲಿದ್ದ ಪೂಜಾ ಪದ್ಧತಿ ನಿಜಕ್ಕೂ ಏನಾಗಿತ್ತು ಎಂಬುದನ್ನು ನಿರ್ಧರಿಸಬೇಕೆಂದು ಕೋರಿದ್ದಾರೆ. ಹೀಗೆ ಆ ಆವರಣದ ಧಾರ್ಮಿಕ ಚಹರೆ ಏನಾಗಿತ್ತು ಎಂಬುದನ್ನು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕಾಗುತ್ತದೆ” ಎಂದಿದ್ದಾರೆ.

ಅಲಹಾಬಾದ್ ಹೈಕೋರ್ಟಿನ ಈ ನಿರ್ಧಾರವೀಗ ಜ್ಞಾನವಾಪಿ ಆವರಣದಲ್ಲಿ ಪುರಾತತ್ವ ಇಲಾಖೆಯ ಶೋಧನೆಗಳಿಗೆ ಸಹಾಯಕವಾಗಿದೆ. ಅಲ್ಲದೇ, ವಿಚಾರಣಾ ನ್ಯಾಯಾಲಯವು ಆರು ತಿಂಗಳ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ನಿರ್ದೇಶಿಸಿರುವುದು ಸಹ ಜ್ಞಾನವಾಪಿ ಪ್ರಕರಣವು ಶೀಘ್ರಗತಿಯಲ್ಲಿ ಪ್ರಗತಿ ಹೊಂದಲಿದೆ ಎನ್ನುವುದರ ಸೂಚನೆಯಾಗಿದೆ.

ಹಿಂದುಗಳ ಮೂರು ದಶಕಗಳ ಕಾನೂನು ಹೋರಾಟ!

ಮಂಗಳವಾರದ ಹೈಕೋರ್ಟ್ ನಿರ್ಣಯವು ಹಿಂದುಗಳಿಗೆ ಏಕಾಏಕಿ ಸಿಕ್ಕ ಮುನ್ನಡೆ ಅಲ್ಲ ಎಂಬ ಕಾರಣಕ್ಕೆ ಮುಖ್ಯವಾಗುತ್ತದೆ. ವಾರಾಣಸಿ ಸಿವಿಲ್ ಕೋರ್ಟ್ ನಲ್ಲಿ ಅಕ್ಟೋಬರ್ 1991ರಲ್ಲೇ ಹಿಂದುಗಳ ಪರವಾಗಿ ಅರ್ಜಿ ಸಲ್ಲಿಕೆಯಾಗಿತ್ತು. 1991ರ ಪೂಜಾಸ್ಥಳಗಳ ಕಾಯ್ದೆಯನ್ನೇ ಉಲ್ಲೇಖಿಸಿ ಈ ಅರ್ಜಿಯನ್ನು ಬರ್ಖಾಸ್ತುಗೊಳಿಸಲಾಗಿತ್ತು. ಆದರೆ, ಹಿಂದುಗಳು ನಿರಂತರವಾಗಿ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸುತ್ತ ಹೋದರು.

ಕೊನೆಗೊಮ್ಮೆ ಏಪ್ರಿಲ್ 2021ರಲ್ಲಿ ವಾರಾಣಸಿ ನ್ಯಾಯಾಲಯವು ಜ್ಞಾನವಾಪಿ ಆವರಣದಲ್ಲಿ ಪುರಾತತ್ವ ಇಲಾಖೆಯ ಸಮೀಕ್ಷೆಗೆ ಒಪ್ಪಿಗೆ ಕೊಟ್ಟಿತು. ಇದನ್ನೇ ಅಲಹಾಬಾದ್ ಹೈಕೋರ್ಟ್ ಎದುರು ಮುಸ್ಲಿಂ ಪಕ್ಷವು ವಿರೋಧಿಸಿತ್ತು. ಅಲ್ಲದೇ, ಮಸೀದಿ ಆವರಣದಲ್ಲಿರುವ ಮಂಗಳಗೌರಿ ಮತ್ತಿತರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಅವಕಾಶ ಬೇಕೆಂದು ಐದು ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ಸಹ ಮುಸ್ಲಿಂ ಪಕ್ಷ ವಜಾಗೊಳಿಸಬೇಕೆಂಬ ಬೇಡಿಕೆ ಇಟ್ಟಿತ್ತು. ಆದರೆ ಮುಸ್ಲಿಂ ಪಕ್ಷದ ಇಂಥ ಎಲ್ಲ ಐದು ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಜ್ಞಾನವಾಪಿ ಪ್ರಕರಣದಲ್ಲಿ ಹಿಂದು ಹಿತಾಸಕ್ತಿಗೆ ಹೈಕೋರ್ಟ್ ಮರುಜೀವ ಕೊಟ್ಟಂತಾಗಿದೆ.

1991ರ ಪೂಜಾ ಸ್ಥಳಗಳ ಕಾಯ್ದೆಯ ಜಡಕುಗಳಾಚೆಗೆ ಪ್ರಕರಣ ಪ್ರಸ್ತುತಪಡಿಸಿದ್ದು ಹೇಗೆ?

ಜ್ಞಾನವಾಪಿ ಪ್ರಕರಣದಲ್ಲಿ ಹಿಂದುಪಕ್ಷಗಳ ಅರ್ಜಿಯನ್ನು ಮುಂಚೂಣಿಯಲ್ಲಿ ಮುನ್ನಡೆಸುತ್ತಿರುವವರು ನ್ಯಾಯವಾದಿ ವಿಷ್ಣುಶಂಕರ ಜೈನ್. ಮಥುರಾದ ಕೃಷ್ಣಜನ್ಮಭೂಮಿ ವಿಚಾರದಲ್ಲೂ ಇವರು ಕಾನೂನು ಹೋರಾಟ ಮಾಡುತ್ತಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪಕ್ಷಗಳ ಆಕ್ಷೇಪಣೆಗಳನ್ನು ತಳ್ಳಿಹಾಕಿದ ಬೆನ್ನಲ್ಲೇ ಟಿವಿ ವಾಹಿನಿಗಳಲ್ಲಿ ಈ ಬಗ್ಗೆ ವಿಶ್ಲೇಷಿಸಿರುವ ಸುಪ್ರೀಕೋರ್ಟ್ ಹಿರಿಯ ವಕೀಲ ಜೆ ಸಾಯಿದೀಪಕ್ ಹೇಳಿರುವುದು- “ನನ್ನ ಸ್ನೇಹಿತ ವಿಷ್ಣು ಶಂಕರ ಜೈನ್ ಬಹಳ ನಾಜೂಕಿನಿಂದ ಈ ಪ್ರಕರಣ ಕಟ್ಟಿದ್ದಾರೆ. ಪೂಜಾಸ್ಥಳಗಳ ಕಾಯ್ದೆಯಲ್ಲಿ ಒಂದು ಭಾಗವು, ಆ ಸ್ಥಳವೇನಾದರೂ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ್ದರೆ ಅದನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಹಕ್ಕೊತ್ತಾಯಕ್ಕೆ ಅವಕಾಶವಿದೆ ಎಂಬುದನ್ನು ಹೇಳುತ್ತದೆ. ಈ ಐತಿಹಾಸಿಕತೆ ನಿರ್ಣಯವಾಗುವುದು ಪುರಾತತ್ವ ಇಲಾಖೆಯ ಸಮೀಕ್ಷೆಯಿಂದ ಮಾತ್ರ. ಅದಾಗುತ್ತಲೇ ಆ ಸ್ಥಳದ ಮೂಲ ಧಾರ್ಮಿಕ ಚಹರೆ ಏನಾಗಿತ್ತು ಎಂಬುದೂ ನಿಚ್ಚಳವಾಗುತ್ತದೆ. ಆಗ ಹಿಂದುಗಳು ಮತ್ತೆ ಅಲ್ಲಿ ಪೂಜೆಗೆ ಅವಕಾಶ ಕೋರಬಹುದಾಗಿದೆ. ಈ ನಿಟ್ಟಿನಲ್ಲಿ ಅಲಹಾಬಾದ್ ಹೈಕೋರ್ಟ್ ನಿರ್ಣಯ ಪ್ರಾಮುಖ್ಯ ಪಡೆಯುತ್ತದೆ” ಎಂದು ವಿಶ್ಲೇಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!