ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, ಶಾಸಕರು ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಅವರು ಸಂಕ್ರಮಣದ ಪ್ರಯುಕ್ತ ಎಡಪದವು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ .
ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಶಾಸಕರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರ ಪರಿಣಾಮ ಶಾಸಕರು ರಸ್ತೆಗೆ ಬಿದ್ದು ಗಾಯವಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗಿದೆ.
ಅದೃಷ್ಟವಶಾತ್ ಶಾಸಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಶಾಸಕರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.