ಹೊಸದಿಗಂತ ವರದಿ, ಮೈಸೂರು
ಜಿಹಾದಿ ಮನಸ್ಸುಗಳಿಂದ ಹಿಂದುಗಳನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೆರಹಳ್ಳಿ ಆರೋಪಿಸಿದರು.
ಸೋಮವಾರ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಘಟಕವನ್ನು ಮೈಸೂರು ನಗರದಲ್ಲಿ ರಚನೆ ಮಾಡುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಗಳು ಮೃದುಸ್ವಭಾವದವರೆಂದು ಪರಿಗಣಿಸಿ ಹೆದರಿಸುವ ಕೆಲಸ ಮಾಡುತ್ತಿರುವುದನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಹಿಂದುಗಳು ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಸಮಸ್ಯೆಗಳು ಎದುರಾಗಲಿದೆ. ತಮ್ಮ ಜಾತಿ,ಮತ,ಪಂಥವನ್ನು ಬದಿಗೊತ್ತಿ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಕರ್ನಾಟಕದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ವಾತಾವರಣ ಉಂಟಾಗಿದೆ. ಗೌರಿಗಣೇಶ ಹಬ್ಬದ ಸಂಭ್ರಮದ ಪ್ರಯುಕ್ತ ಗಣೇಶನ ಮೆರವಣಿಗೆ ಮಾಡಿದರೆ ತಡೆಯುತ್ತಾರೆ ಎನ್ನುವುದನ್ನು ನೋಡಿದರೆ, ಯಾವ ಮಟ್ಟಿಗೆ ಜಿಹಾದಿ ಮನಸ್ಸಿನವರು ಹೆದರಿಸುವ ಕೆಲಸ ಮಾಡಬಹುದು ಎಂದರು.
ಆಡಳಿತಾರೂಢ ಸರ್ಕಾರದಿಂದ ರಾಜ್ಯದಲ್ಲಿ ಹಿಂದುಗಳನ್ನು ಬೆದರಿಸುವ ಕಾರ್ಯ ನಡೆಯುತ್ತಿದೆ. ಮೊದಲೆಲ್ಲಾ ಹಿಂದುಗಳನ್ನು ಸಂಘಟನೆ ಮಾಡಬೇಕಿರಲಿಲ್ಲ. ಹಬ್ಬದ ಮೂಲಕ ಒಂದಾಗುತ್ತಿದ್ದರು. ಆದರೆ, ಈಗ ಗಣೇಶೋತ್ಸವ ಹೆಸರಿನಲ್ಲಿ ಒಂದು ಕಡೆ ಸೇರುವುದನ್ನು ತಪ್ಪಿಸಲು ಗಲಾಟೆ,ಬೆದರಿಸುವ ಕೆಲಸ ಮಾಡಲಾಗುತ್ತದೆ. ಹಿಂದುಗಳ ಮಕ್ಕಳಲ್ಲಿ ಭಯದ ವಾತಾವರಣ ಮೂಡಿಸಲು ಜಿಹಾದಿ ಸಂಘಟನೆಗಳು ಅಶಾಂತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿಕಾರಿದರು.
ದೇವಸ್ಥಾನದ ಬಳಿ, ಮಾರುಕಟ್ಟೆಗಳಲ್ಲಿ ರಾಮನ ತಿಲಕ,ಗೋಮುತ್ರ ಮೊದಲಾದ ಪರಿಕರಗಳನ್ನು ಮಾರಾಟ ವಾಡಲು ಮುಸ್ಲಿಮರಿಗೆ ಅವಕಾಶವಿದೆ. ಮಾರಾಟ ಮಾಡುವ ಮೂಲಕ ಭಾವೈಕ್ಯತೆಯ ಮಾತನ್ನಾಡುತ್ತಾರೆ. ಆದರೆ, ಮಸೀದಿ ಎದುರು ಗಣೇಶನ ಮೆರವಣಿಗೆ, ಡಿಜೆ ವಾಹನ ಸಾಗಿದರೆ ಬೇಡ ಎನ್ನುವ ಜಿಹಾದಿ ಮನಸ್ಸುಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದೊoದು ದಿನ ಹಬ್ಬದ ಆಚರಣೆಯನ್ನೇ ನಿಲ್ಲಿಸುವಂತೆ ಹೇಳುವ ಕಾಲ ಬರಲಿದೆ ಎಂದು ಎಚ್ಚರಿಸಿದರು.
ಧರ್ಮ, ದೇಶ,ಹಿಂದುತ್ವದ ರಕ್ಷಣೆ ಮಾಡಲು ಸದಾ ಹೋರಾಟ ಮಾಡುತ್ತೇವೆ. ಧರ್ಮದ ಒಳಗೆ ರಾಜಕೀಯ ಬರಬಾರದು. ರಾಜಕೀಯ ವಿಚಾರಕ್ಕೆ ನಾನು ತಲೆಹಾಕಲ್ಲ. ನಮಗೆ ಮತ್ತು ಹೋರಾಟಕ್ಕೆ ಬೆಂಬಲವನ್ನು ಕೊಡುವ ಮನಸ್ಸುಗಳು ಇವೆ. ಬಿಜೆಪಿ ನಮ್ಮ ಹಿಂದುಪರ ಹೋರಾಟಕ್ಕೆ ಬೆಂಬಲ ನೀಡಲಿದೆ. ನಾಗಮಂಗಲದ ಘಟನೆ ಕರ್ನಾಟಕದ ಬೇರೆಲ್ಲೂ ಮರುಕಳಿಸಬಾರದು. ಗಣೇಶನ ಮೆರವಣಿಗೆ ವೇಳೆ ಬಂದೋಬಸ್ತ್ ಮಾಡುವ ಬಗ್ಗೆ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡಲಾಗುವುದು. ಗೃಹಸಚಿವರು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದುಗಳ ಹಬ್ಬ ಹರಿದಿನಗಳು ಬಂದಾಗ ಗಲಾಟೆ, ಕಲ್ಲುತೂರುವ ಕೆಲಸ ನಡೆಯುತ್ತಿದೆ. ಬೇರೆ ಹಬ್ಬಗಳಲ್ಲಿ ಇಲ್ಲದ ಗಲಾಟೆ ಹಿಂದುಗಳ ಹಬ್ಬದಲ್ಲೇ ಯಾಕೇ ನಡೆಯುತ್ತದೆ ಎನ್ನುವುದನ್ನು ಚಿಂತಿಸಬೇಕು. ಹಿಂದುಗಳು ಮೃಧುದೋರಣೆ ಹೊಂದಿಲ್ಲ. ಮೃಧುಸ್ವಭಾವದವರು ಇಲ್ಲ. ಧರ್ಮ ರಕ್ಷಣೆಗಾಗಿ ಹೋರಾಟ ಮಾಡುವ ಶಕ್ತಿ ಹೊಂದಿದ್ದಾರೆ ಎಂದು ಗುಡುಗಿದರು.