Saturday, February 4, 2023

Latest Posts

ಕಾಲೇಜು ಬಿಟ್ಟ ಮಕ್ಕಳೊಂದಿಗೆ ಗೃಹಿಣಿಯ ತಿಂಡಿ ಉದ್ದಿಮೆ- ಶಾರ್ಕ್‌ಟ್ಯಾಂಕ್‌ನಲ್ಲಿ ಹೂಡಿಕೆಗೆ ಮುಗಿಬಿದ್ದ ಜಡ್ಜಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಾರ್ಕ್‌ ಟ್ಯಾಂಕ್‌ ಇಂಡಿಯಾದ ಎರಡನೇ ಆವೃತ್ತಿ ಪ್ರಾರಂಭವಾಗಿರುವ ವಿಷಯ ಗೊತ್ತೇ ಇದೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ತನ್ನ ಕಾಲೇಜು ಬಿಟ್ಟ ಮಕ್ಕಳೊಂದಿಗೆ 47 ವರ್ಷದ ಗೃಹಿಣಿ ಸ್ಥಾಪಿಸಿದ ತಿಂಡಿ ಗೃಹೋದ್ದಿಮೆಗೆ ಹೂಡಿಕೆ ಮಾಡಲು ಶಾರ್ಕ್‌ ಟ್ಯಾಂಕಿನ ಹೆಸರಾಂತ ಉದ್ಯಮಿಗಳು ಮುಗಿಬಿದ್ದಿರುವ ಕಥೆ ಗೊತ್ತೇ ? ಇಲ್ಲಿದೆ ನೋಡಿ.

ಈಗ ಆರು ವರ್ಷಗಳ ಹಿಂದೆ 47 ವರ್ಷದ ಗೀತಾ ಪಾಟೀಲ್‌ ಎಂಬ ಗೃಹಿಣಿ ಮುಂಬೈನ ತನ್ನ ಪುಟ್ಟ ಮನೆಯಲ್ಲಿ ತಿಂಡಿ ತಯಾರಿಸಿ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಪತಿ 2016ರಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಯಿತು. ಹಾಗಾಗಿ ತಮ್ಮ ತಾಯಿಯಿಂದ ಪ್ರೇರಣೆ ಪಡೆದ ಆಕೆ ಮೊದ ಮೊದಲು ಬೆಳಗಿನ ಉಪಾಹಾರಗಳನ್ನು ಮಾಡಿ ಸ್ಥಳೀಯ ಮುಂಬೈ ಕಾರ್ಪೋರೇಷನ್‌ ಆಫೀಸುಗಳ ಕೆಲ ಉದ್ಯೋಗಿಗಳಿಗೆ ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಕೈ ರುಚಿಗೆ ಮಾರುಹೋದ ಕಚೇರಿಯ ಸಿಬ್ಬಂದಿಗಳು ಕಚೇರಿಯಲ್ಲಿಯೇ ಮಾರಾಟ ಮಾಡುವ ಅವಕಾಶ ಕಲ್ಪಿಸಿದರು. ನಿಧಾನವಾಗಿ ಕುಟುಂಬಕ್ಕೆ ಜೀವನ ನಿರ್ವಹಿಸಲು ಸಾಕಾಗುವಷ್ಟು ಆದಾಯ ಬರಲು ಪ್ರಾರಂಭವಾಯಿತು. ಆದರೆ ನಂತರದಲ್ಲಿ ಕೋವಿಡ್‌ ಲಾಕ್‌ಡೌನ್‌ ನಿಂದಾಗಿ ಉಪಹಾರ ತಯಾರಿಸುವುದು ಕಡಿಮೆಯಾಯಿತು. ಆ ಸಂದರ್ಭದಲ್ಲಿ ಚಕ್ಕುಲಿ, ಪೂರನ್‌ ಪೋಲೀ ಮುಂತಾದ ಕುರುಕಲು ತಿಂಡಿ ಗಳನ್ನು ತಯಾರಿಸಿ ಅವುಗಳನ್ನು ಗ್ರಾಹಕರಿಗೆ ತಲುಪಿಸುತ್ತ ಹೊಸ ಮಾರ್ಗ ಕಂಡುಕೊಂಡರು. ನಂತರದಲ್ಲಿ ಅವುಗಳ ಬೇಡಿಕೆಯೂ ಹೆಚ್ಚಾಯಿತು.

ಆ ಸಮಯದಲ್ಲಿ ಕಾಲೇಜು ಬಿಟ್ಟಿದ್ದ ಆಕೆಯ ಇಬ್ಬರು ಮಕ್ಕಳು ತಾಯಿಯ ಈ ವ್ಯಾಪಾರಕ್ಕೆ ಹೊಸ ಆಯಾಮ ಒದಗಿಸಿದರು. ಹೊಸ ವೆಬ್ಸೈಟ್‌ ಪ್ರಾರಂಭಿಸಿ ʼಪಾಟೀಲ್‌ ಕಾಕಿʼ ಎಂಬ ಬ್ರ್ಯಾಂಡ್‌ ಸೃಷ್ಟಿಸಿ ಆನ್‌ ಲೈನ್‌ ಮೂಲಕ ತಿಂಡಿ ತಿನಿಸುಗಳ ಮಾರಾಟ ಆರಂಭಿಸಿದರು. ಮೊದ ಮೊದಲು 15-20 ಆರ್ಡರ್‌ ಗಳು ಬರುತ್ತಿದ್ದವು. ನಂತರದಲ್ಲಿ ಬೇಡಿಕೆ ಹೆಚ್ಚಾಗಿ ಪ್ರಸ್ತುತ ತಿಂಗಳಿಗೆ 3000 ಸಾವಿರದಷ್ಟು ಆರ್ಡರ್‌ಗಳು ಬರುತ್ತಿವೆ. ದಿನೇ ದಿನೇ ಆರ್ಡರ್‌ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಆನ್‌ಲೈನ್‌ ವ್ಯಾಪಾರ ಪ್ರಾರಂಭವಾದ ಎರಡೇ ವರ್ಷದಲ್ಲಿ 1 ಕೋಟಿಗೂ ಅಧಿಕ ವಹಿವಾಟು ನಡೆಸಿದೆ ʼಪಾಟೀಲ್‌ ಕಾಕಿʼಯ ತಿಂಡಿ ಉದ್ದಿಮೆ. ಈ ವರ್ಷದ ಕೊನೆಯಲ್ಲಿ 3ಕೋಟಿಗೂ ಅಧಿಕ ವ್ಯಾಪಾರ ಮಾಡುವ ನೀರಿಕ್ಷೆಯಿದೆ. ಪಾಟೀಲ್‌ ಕಾಕಿ ತಯಾರಿಸುವ ಚಕ್ಲಿಗಳು, ಮೋದಕಗಳು, ಚಿವ್ಡಾಸ್, ಪುರನ್ ಪೋಲಿ ಮತ್ತು ಮಖಾನಗಳಂತಹ ಆರೋಗ್ಯಕರ ತಿಂಡಿಗಳನ್ನು ಜನರು ನೆಚ್ಚಿಕೊಳ್ಳುತ್ತಿದ್ದಾರೆ. ಕಾಲೇಜು ಬಿಟ್ಟ ಮಕ್ಕಳೊಂದಿಗೆ ಗೃಹಿಣಿ ಸ್ಥಾಪಿಸಿದ ಈ ಆಹಾರ ಉದ್ದಿಮೆ ಶಾರ್ಕ್‌ ಟ್ಯಾಂಕಿನ ಶಾರ್ಕುಗಳ ಮನಗೆದ್ದಿವೆ. ಆಹಾರೋದ್ದಿಮೆಯ ವೇಗವಾದ ಬೆಳವಣಿಗೆ ಮತ್ತು ವ್ಯಾಪಾರ ವಿಸ್ತಾರದ ಬಗ್ಗೆ ತಿಳಿಸಿರುವ ಶಾರ್ಕ್‌ ಟ್ಯಾಂಕಿನ ನಿರ್ಣಾಯಕರು ಈ ಪಾಟೀಲ್‌ ಕಾಕಿಯ ಉದ್ದಿಮೆಯಲ್ಲಿ ಮುಗಿಬಿದ್ದು ಹೂಡಿಕೆ ಮಾಡಿದ್ದಾರೆ.

ಶಾರ್ಕ್‌ ಟ್ಯಾಂಕಿನಲ್ಲಿ ನಿರ್ಣಾಯಕರಾಗಿರುವ ಭಾರತದ ಅತ್ಯುತ್ತಮ ಉದ್ದಿಮೆದಾರರಾದ ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನೀತಾ ಸಿಂಗ್, ಬೋಟ್‌ ಸಂಸ್ಥಾಪಕ ಅಮನ್‌ ಗುಪ್ತಾ, ಲೆನ್ಸ್‌ಕಾರ್ಟ್‌ನ ಸಹ-ಸಂಸ್ಥಾಪಕ ಪಿಯೂಶ್ ಬನ್ಸಾಲ್ ಮತ್ತು ಶಾದಿ.ಕಾಮ್ ನ ಅನುಪಮ್ ಮಿತ್ತಲ್ ನಡುವೆ ತೀವ್ರ ಪೈಪೋಟಿ ನಡೆದು ಕೊನೆಗೆ 40 ಲಕ್ಷ ರೂಪಾಯಿಗಳಿಗೆ ಪಾಟಿಲ್‌ ಕಾಕಿ ಉದ್ದಿಮೆಯ 4 ಶೇಕಡಾ ಈಕ್ವಿಟಿ ಖರೀದಿಸುವಲ್ಲಿ ಪಿಯೂಶ್ ಬನ್ಸಾಲ್ ಮತ್ತು ಅನುಪಮ್ ಮಿತ್ತಲ್ ಸಫಲರಾಗಿದ್ದಾರೆ.

ಕೋಟಿ ಕೋಟಿ ಬಂಡವಾಳದ ಗುರಿಹಾಕಿಕೊಂಡು ಒಂದೇ ಸಲ ಬಾನೆತ್ತರಕ್ಕೆ ಜಿಗಿಯ ಬಯಸುವ ಇಂದಿನ ನವೋದ್ದಿಮೆದಾರರಿಗೆ ಪಾಟೀಲ್‌ ಕಾಕಿ ಉದ್ದಿಮೆಯು ಉತ್ತಮ ಪಾಠವೊಂದನ್ನು ಹೇಳುತ್ತಿದೆ. ಚಿಕ್ಕದಾಗಿ ಪ್ರಾರಂಭಿಸಿ ಚೊಕ್ಕದಾಗಿ ಕಟ್ಟುತ್ತ ಹೋದರೆ ಎಲ್ಲವೂ ಸಾಧ್ಯ ಎಂಬ ನೀತಿಪಾಠ ಇಲ್ಲಿ ಕಾಣಸಿಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!