ಹೊಸದಿಗಂತ ವರದಿ,ಬಳ್ಳಾರಿ:
ನಗರದ ನಿವೇಶನ ರಹಿತ ನಾಗರಿಕರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ಒದಗಿಸಲು ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುವೆ, ಸುಳ್ಳು ಹೇಳಿ ಪುಕ್ಕಟೆ ಪ್ರಚಾರ ಪಡೆಯುವ ವ್ಯಕ್ತಿ ನಾನಲ್ಲ, ಯಾವುದೇ ಭರವಸೆ ನೀಡಿದರೂ ಅದನ್ನು ಈಡೇರಿಸುವವರಿಗೆ ಬಿಡುವ ಜಾಯಮಾನ ನನ್ನದಲ್ಲ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾರ್ಕಲತೊಟ ಪಾಲನ್ನ ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅವಧಿಯಲ್ಲಿ ನಗರದ ಅಭಿವೃದ್ಧಿ ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಲು ಸಂಕಲ್ಪ ಮಾಡಿರುವೆ, ನಾಗರಿಕರ ಸಹಕಾರ ಅತ್ಯಗತ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರವೇ ಇದ್ದು, ಅನುದಾನದ ಕೊರತೆ ಎದುರಾಗೊಲ್ಲ ಎನ್ನುವ ವಿಶ್ವಾಸವಿದೆ. ಸ್ಥಿತಿವಂತರು ನಿವೇಶನಗಳನ್ನು ಪಡೆಯುವುದು ದೊಡ್ಡ ಮಾತಲ್ಲ, ಮಧ್ಯಮ ವರ್ಗ, ಬಡ ಜನರಿಗೆ ನಿವೇಶನ ಪಡೆಯುವುದು ಇತ್ತೀಚೆಗೆ ದೊಡ್ಡ ಸವಾಲಾಗಿದೆ. ಅಂತವರಿಗೆ ಬೂಡಾದಿಂದ ಕೈಗಟುಕುವ ದರದಲ್ಲಿ ನಿವೇಶನಗಳನ್ನು ಒದಗಿಸಬೇಕು ಎನ್ನುವ ಬಯಕೆ ನನ್ನದು, ಇದಕ್ಕಾಗಿ ಎಷ್ಟೇ ಸಮಸ್ಯೆ ಎದುರಾದರೂ ಎದುರಿಸುವೆ ಎಂದರು.
ನಗರದ ಬಿ.ಗೋನಾಳ್ ಲೇಔಟ್ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರಿಂದ ಚಾಲನೆ ನೀಡಿದ್ದ ಬಿ.ಗೋನಾಳ್ ಲೇಔಟ್ ಅಭಿವೃದ್ಧಿ ಕಾಮಗಾರಿ, ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. 102 ಎಕರೆ ಪ್ರದೇಶದಲ್ಲಿ ರೈತರು ಹಾಗೂ ಬೂಡಾ ತಲಾ 50:50 ಅನುಪಾತದಲ್ಲಿ ವಿವಿಧ ಅಳತೆಯ 1583 ನಿವೇಶನಗಳನ್ನು ರಚಿಸಿ ಲೇಔಟ್ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೇ, ಕೆಲ ರೈತರ ಹೆಸರುಗಳನ್ನು ಗೆಜೆಟ್‌ನಲ್ಲಿ ಮುದ್ರಣ ದೋಷ ಹೊಂದಿದ್ದರಿಂದ ಅದನ್ನು ಮರು ಆದೇಶಕ್ಕೆ ಕಳುಹಿಸಲಾಗಿತ್ತು. ಇಲಾಖೆ ಕಾರ್ಯದರ್ಶಿಗಳು ಶೀಘ್ರದಲ್ಲೇ ಅದನ್ನು ಸರಿಪಡಿಸಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ತಿಳಿಸಿದರು. ನಗರದ ಸೌಂದರ್ಯ ಹೆಚ್ಚಿಸಲು ನನ್ನದೇ ಕೆಲ ಯೋಜನೆಗಳನ್ನು ಹಾಕಿಕೊಂಡಿರುವೆ, ಅವದಿಯಲ್ಲಿ ಬಳ್ಳಾರಿ ನಗರ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.