ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ: ಜನರ ಓಡಾಟಕ್ಕೆ ನಿಷೇಧ

ಹೊಸದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಕುರಿತಂತೆ ಸ್ಪಷ್ಟ ಮಾರ್ಗಸೂಚಿಯನ್ನು ಜಿಲ್ಲಾಡಳಿತ ಹೊರಡಿಸಿದ್ದು ಶುಕ್ರವಾರ ರಾತ್ರಿ 10.00 ಗಂಟೆಯಿಂದ ಸೋಮವಾರ ಬೆಳಿಗ್ಗೆ 5:00 ಗಂಟೆಯ
ವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಕುರಿತು ತಿಳಿಸಲಾಗಿದೆ.
ತುರ್ತು, ಅತ್ಯಾವಶ್ಯಕ ಸೇವೆಗಳು ಮತ್ತು ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಂತಾದವುಗಳು ಸಂಪೂರ್ಣವಾಗಿ
ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವುಗಳ ಅಧಿಕಾರಿ,ಸಿಬ್ಬಂದಿಗೆ ಅನಿರ್ಬಂಧಿತ ಓಡಾಟಕ್ಕೆ , ಅವಕಾಶ ನೀಡತಕ್ಕದ್ದು ಎಂದು ಸೂಚಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಒಳಗೊಂಡಂತೆ ಎಲ್ಲಾ ಉದ್ದಿಮೆಗಳ ಕಾರ್ಯಾಚರಣೆಗೆ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದ್ದು
ನೌಕರರು ಆಯಾ ಸಂಘ ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸುವಂತೆ ತಿಳಿಸಲಾಗಿದೆ.
ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ರೋಗಿಗಳು, ಅವರ ಸಹಾಯಕರು ಲಸಿಕೆ ಹಾಕಿಸಿಕೊಳ್ಳಲು ಹೊರಟ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರುವಡಿಸಿ ಸಂಚರಿಸಲು ಅನುಮತಿ ನೀಡಲಾಗಿದೆ.
ಅಹಾರ, ದಿನಸಿ ,ಹಣ್ಣು, ತರಕಾರಿ, ಡೈರಿ ಮತ್ತು ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ .
ಜನರು ತಮ್ಮ ಮನೆಯ ಹೊರಗೆ ಓಡಾಡುವುದನ್ನು ಕಡಿಮೆ ಮಾಡುವ ದೃಷ್ಟಿಯಿಂದ 24×7 ಅವಧಿಯಲ್ಲಿ ಅವಶ್ಯಕ ಸಾಮಗ್ರಿಗಳನ್ನು ಮನೆಮನೆಗೆ ಪೂರೈಸಲು ಕ್ರಮಕ್ಕೆ ಸೂಚನೆ ನೀಡಲಾಗಿದೆ .
ರೆಸ್ಟೋರೆಂಟ್ ಮತ್ತು ಹೋಟೇಲುಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಲಾಗಿದ್ದು ಹೊಟೇಲ್ ಒಳಗೆ ಸೇವೆ ನೀಡಲು ಅವಕಾಶ ಇಲ್ಲ, ಎಲ್ಲಾ ಸಾರ್ವಜನಿಕ ಉದ್ಯಾನಗಳು ಮುಚ್ಚಿರತಕ್ಕದ್ದು
ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ, ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೋಳಪಟ್ಟು ಹೊರಾಂಗಣ 200 ಜನರು ಮೀರದಂತೆ ಹಾಗೂ ಒಳಂಗಣದಲ್ಲಿ 100 ಜನರು ಮೀರದಂತೆ , ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಮತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!